ಬೆಂಗಳೂರು: ಬೆಂಗಳೂರು ಮತ್ತು ಮೈಸೂರು ಭಾಷೆ ಶೈಲಿ ಕುರಿತಾಗಿ ಸ್ವಾರಸ್ಯಕರ ಚರ್ಚೆ ವಿಧಾನಸಭೆಯಲ್ಲಿ ಗುರುವಾರ ನಡೆಯಿತು. ಕಾಂಗ್ರೆಸ್ ಸದಸ್ಯ ಅನಿಲ್ ಚಿಕ್ಕಮಾದು ಅವರು, ಹೆಚ್.ಡಿ. ಕೋಟೆ ತಾಲೂಕನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದು ಸರ್ಕಾರಕ್ಕೆ ಪ್ರಶ್ನೆ ಹಾಕಿದರು. ಮುಖ್ಯಮಂತ್ರಿಗಳ ಪರವಾಗಿ ಕಂದಾಯ ಸಚಿವ ಆರ್ ಅಶೋಕ್ ಅವರು, ಅನಿಲ್ ಚಿಕ್ಕಮಾದು ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ 'ಮಾಡಿದ್ದೀವಿ' ಬದಲಾಗಿ 'ಮಾಡಿದ್ದೀರಿ' ಎಂದರು.
ಅಶೋಕ್ಗೆ ಸ್ಪೀಕರ್ ಬೆಂಬಲ: ಈ ವೇಳೆ ಎದ್ದು ನಿಂತ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಅಶೋಕ್ ಮಾಡಿದ್ದೀವಿ ಬದಲು ಮಾಡಿದ್ದೀರಿ ಎಂದಿದ್ದಾರೆ. ಅವರ ಪಕ್ಕದಲ್ಲಿ ಕೂತವರಿಗೆ ಕೇಳಿ ಏನು ಹೇಳಿದ್ದಾರೆ ಎಂದರು. ಈ ಸಂದರ್ಭದಲ್ಲಿ ಅಶೋಕ್ ಸಹಾಯಕ್ಕೆ ಬಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಮಾಡಿದ್ದೀವಿ ಎಂದು ಅವರು ಹೇಳಿದ್ದು ಎಂದು ಅಶೋಕ್ ಬೆಂಬಲಕ್ಕೆ ನಿಂತರು.
ನೀವು ನಿಮ್ಮ ಭಾಷೆಯಲ್ಲಿ ಹಂಗೆ ಹೇಳಿದ್ದೀರಿ, ನಮ್ಮ ಬೆಂಗಳೂರು ಭಾಷೆಯಲ್ಲಿ ಹಂಗೆ ಹೇಳುವುದು. ಏನಾದರೂ ತಪ್ಪು ಇದ್ದರೆ ಹೇಳಿ ಎಂದು ಅಶೋಕ್ ಹೇಳಿದರು. ಇದಕ್ಕೆ ಬೆಂಗಳೂರು ಭಾಷೆಗೂ, ಮೈಸೂರು ಭಾಷೆಗೂ ವ್ಯತ್ಯಾಸ ಇಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದಾಗ, ಅವರ ವಾದವನ್ನು ನಿರಾಕರಿಸಿದ ಅಶೋಕ್, ಬಹಳ ವ್ಯತ್ಯಾಸ ಇದೆ ಎಂದು ಹೇಳಿದರು.
ಸಿದ್ದರಾಮಯ್ಯ ವಾದ ನಿರಾಕರಿಸಿದ ಸ್ಪೀಕರ್: ಏನಿಲ್ಲ, ಮೈಸೂರು ಪ್ರಾಂತ್ಯದಲ್ಲಿ ಭಾಷೆಯಲ್ಲಿ ವ್ಯತ್ಯಾಸ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದಾಗ, ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಇದೆ. ಆದರೆ ಸಿದ್ದರಾಮಯ್ಯ ವಾದವನ್ನು ನಿರಾಕರಿಸಿದ ಸ್ಪೀಕರ್ ಕಾಗೇರಿ ಅವರು, ವ್ಯತ್ಯಾಸ ಇದೆ, ನೀವು ಅ ಗೆ ಅ ಅಂತಾನೇ ಹೇಳುತ್ತೀರಿ, ಇವರು ಸ್ವಲ್ಪ ಬೇರೆ ಹೇಳುತ್ತಾರೆ. ನಿಮಗೆ ಬೆಂಗಳೂರು ರೂಢಿ ಆಗಿಲ್ಲ ಎಂದು ಹೇಳಿದರು.
ಹಾಸ್ಯ ಚಟಾಕಿ ಹಾರಿಸಿದ ಶಾಸಕ ಅನ್ನದಾನಿ: ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಮಾಧುಸ್ವಾಮಿ, ಅಶೋಕ್ ಮಾತನಾಡುವಾಗ ಮಾಡಿದ್ದೀವಿ ಅನ್ನಲ್ಲ ಮಾಡಿದ್ದೀರಿ ಅಂತಾರೆ. ಮಾಡಿದ್ದೀರಿ ಎಂದರೆ ಅವರು ಮಾಡಿದ್ದಾರೆ ಎಂದಾಗುತ್ತದೆ. ಮಾಡಿದ್ದೀವಿ ಎಂದು ಅನ್ನಬೇಕು ಎಂದು ಸಲಹೆ ನೀಡಿದರು. ಅದಕ್ಕೆ 224 ಜನರು ಸರ್ಕಾರನೇ ಎಂದು ತಮ್ಮ ಭಾಷಾ ಶೈಲಿಯನ್ನು ಅಶೋಕ್ ಸಮರ್ಥಿಸಿಕೊಂಡರು.ಇದರ ಮಧ್ಯೆ ಪ್ರವೇಶಿಸಿದ ಜೆಡಿಎಸ್ ಶಾಸಕ ಕೆ. ಅನ್ನದಾನಿ ಅವರು, ಕನ್ನಡದಲ್ಲಿ ಅನೇಕ ಉಪ ಭಾಷೆಗಳಿವೆ. ಹಾಗಾಗಿ, ಅಶೋಕಣ್ಣ ಅವರದ್ದು ಒಂದು ಉಪ ಭಾಷೆ ಬಿಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇದನ್ನೂ ಓದಿ: ಪ್ರಶ್ನೋತ್ತರ ಕಲಾಪಕ್ಕೆ ಮೊದಲ ಆದ್ಯತೆ ನೀಡಿ: ಸಚಿವರ ವಿರುದ್ಧ ಸ್ಪೀಕರ್ ಅಸಮಾಧಾನ
ಇದಕ್ಕೂ ಮುನ್ನ ಅನಿಲ್ ಚಿಕ್ಕಮಾದು ಮಾತನಾಡಿ, ಕಾಕನಕೋಟೆ ಸಫಾರಿ ಸೇರಿದಂತೆ ಈ ಭಾಗದ ವೀಕ್ಷಣೆಗೆ ಹೊರ ರಾಜ್ಯ ಹಾಗೂ ನಮ್ಮ ರಾಜ್ಯದ ರಾಜ್ಯಪಾಲರು, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ನ ನ್ಯಾಯಾಧೀಶರು, ಸಿನಿಮಾ ನಟರು ಬರುತ್ತಾರೆ. ಹಾಗಾಗಿ, ಪ್ರವಾಸಿ ತಾಣವನ್ನಾಗಿ ನಮ್ಮ ತಾಲೂಕನ್ನು ಮಾಡಬೇಕು ಎಂದು ಮನವಿ ಮಾಡಿದರು.
ಸಿಎಂ ಪರವಾಗಿ ಉತ್ತರ ನೀಡಿದ ಸಚಿವ ಅಶೋಕ್, ಪ್ರವಾಸಿಗರ ಅನುಕೂಲಕ್ಕಾಗಿ ಆನೇಕ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿ ತಾಣವನ್ನಾಗಿ ಮಾಡುವ ಸಂಬಂಧ ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.