ಬೆಂಗಳೂರು: ಬ್ಯಾಟಿಂಗ್, ರನೌಟ್, ಡಿಸಿಶನ್ ರಿವ್ಯೂ ಎಂಬೆಲ್ಲಾ ಕ್ರಿಕೆಟ್‌ನಲ್ಲಿ ಬಳಸುವ ಸಂಗತಿಗಳು ಇಂದು ವಿಧಾನಸಭೆಯಲ್ಲೂ ಪ್ರಸ್ತಾಪವಾಗಿ ಸ್ವಾರಸ್ಯಕರ ಚರ್ಚೆ ನಡೆಯಿತು.
ಪ್ರಶ್ನೋತ್ತರ ಕಲಾಪ ಮುಗಿದ ನಂತರ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡಿದ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್, 'ಕಾನೂನು ಸಚಿವರಾದ ಮಾಧುಸ್ವಾಮಿ ಅವರಿಂದ ನಾವು ಸಾಕಷ್ಟು ಕಲಿಯಬೇಕಿದೆ. ಆದರೆ ಅವರು ಕೂಡ ಮಾಜಿ ಸಿಎಂ ಯಡಿಯೂರಪ್ಪ ಅವರಂತೆ ತಾಳ್ಮೆ, ಬದ್ಧತೆ ರೂಢಿಸಿಕೊಂಡು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನಾವು ಯಡಿಯೂರಪ್ಪ ಅವರಿಗೆ ಪಕ್ಷಾತೀತವಾಗಿ ಗೌರವ ಕೊಡುತ್ತೇವೆ' ಎಂದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ಮಾಧುಸ್ವಾಮಿ, 'ನಮಗೆ ಜವಾಬ್ದಾರಿ ಇಲ್ಲದಿದ್ದರೆ ಮಾತನಾಡುವುದಿಲ್ಲ. ಜವಾಬ್ದಾರಿ ಇರುವುದರಿಂದಲೇ ಮಾತನಾಡುತ್ತಿದ್ದೇವೆ' ಎಂದರು.
ಈ ವೇಳೆ ಸಭಾಧ್ಯಕ್ಷರ ಸದನ ನಡೆಸುವ ಜವಾಬ್ದಾರಿಗೆ ಮೆಚ್ಚುಗೆ ಸೂಚಿಸಿ ಮಾತನಾಡಿದ ಯು.ಟಿ.ಖಾದರ್, 'ಇದು ಒಂದು ರೀತಿ ಕ್ರಿಕೆಟ್ ಆಟದ ಥರ ಇದೆ. ಸ್ಟೇಡಿಯಂನಲ್ಲಿ ಕುಳಿತುಕೊಂಡವರು ಹೀಗೆ ಬ್ಯಾಟ್ ಮಾಡಬೇಕು, ಹಾಗೆ ಹೊಡೀಬೇಕೆ ಅಂತಾರೆ. ಆದ್ರೆ ಬ್ಯಾಟ್ ಹಿಡಿದವನಿಗೆ ತಾನೆ ಅದರ ಕಷ್ಟ ಗೊತ್ತು. ಅಂಥ ಪರಿಸ್ಥಿತಿ ಇವತ್ತು ಇದೆ' ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, 'ಖಾದರ್ ಬ್ಯಾಟ್‌ನಲ್ಲಿ ಚೆಂಡು ಹೊಡೀತಿಯಾ. ಆದರೆ ರನ್ ಮಾಡುವಾಗ ಎದುರುಗಡೆ (ನಾನ್‌ಸ್ಟ್ರೈಕ್)ನಲ್ಲಿ ಇರುವವನನ್ನು ಕೇಳಿಯೇ ರನ್ ತೆಗೀಬೇಕು. ಇಲ್ಲದಿದ್ದರೆ ರನೌಟ್ ಆಗ್ತಿಯಪ್ಪಾ?, ನಿನ್ನ ಜೊತೆಗೀಗ ನಾನು ರನ್ ಓಡುವವನು ಇದ್ದೀನಿ. ಹಾಗಾಗಿ, ನನ್ನ ಹತ್ರ ಕೇಳಿ ರನ್ ಮಾಡಪ್ಪಾ, ನಾವು ಕ್ರಿಕೆಟ್ ನೋಡಾಕ್ ಬಂದಿಲ್ಲ. ನಾವೂ ಕೂಡಾ ವಿಕೆಟ್ ಮಧ್ಯೆ ಓಡಾಕ್ ಬಂದಿದ್ದೀವಿ. ಕ್ರಿಕೆಟ್‌ನಲ್ಲೂ ಕೂಡಾ ಅಪೀಲ್ ಅನ್ನೋದಿದೆ. ನಾವೂ ಕೂಡಾ ಇಲ್ಲಿ ಸಭಾಧ್ಯಕ್ಷರಿಗೆ ಅಪೀಲ್ ಮಾಡ್ತಿದ್ದೀವಿ ಅಷ್ಟೇ. ನಾವು ಅವರಿಗೆ ಕಾನೂನು ಹೇಳಿಕೊಡ್ತಿಲ್ಲ' ಎಂದರು.
ಈ ಸಂದರ್ಭದಲ್ಲಿ ಸ್ಪೀಕರ್ ಮಾತನಾಡಿ, 'ಇದು ಕೂಡ ಅಂಪೈರ್ ತೀರ್ಪನ್ನು ಪುನರ್ ಪರಿಶೀಲನೆ ಮಾಡಿದಂತೆ' ಎಂದು ಚರ್ಚೆಗೆ ತೆರೆ ಎಳೆದರು.
ಇದನ್ನೂ ಓದಿ: ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗೆ ಅಗತ್ಯ ಕ್ರಮ : ಸಚಿವ ಕೆ.ಎಸ್.ಈಶ್ವರಪ್ಪ