ಬೆಂಗಳೂರು : ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಯೋಜನೆಯಡಿಯಲ್ಲಿ ಹೊಸ ರಸ್ತೆಗಳ ಕಾಮಗಾರಿಗೆ ಕಳೆದ ಫೆಬ್ರವರಿಯಲ್ಲಿ ಆರೋಗ್ಯ ಸಚಿವ ಸುಧಾಕರ್ ಚಾಲನೆ ನೀಡಿದರು. ಬರೋಬ್ಬರಿ 11 ತಿಂಗಳು ಕಳೆದರೂ ಕಾಮಗಾರಿ ಮಾತ್ರ ಇನ್ನು ಪೂರ್ಣಗೊಂಡಿಲ್ಲ. ಇದರಿಂದಾಗಿ ರೋಗಿಗಳು ಈ ಹಿಂದೆಯೂ ಸಂಕಷ್ಟ ಎದುರಿಸುತ್ತಿದ್ದರೂ ಈಗಲೂ ಅದು ಮುಂದುವರೆದಿತ್ತು.
ಈ ನಿಟ್ಟಿನಲ್ಲಿ ಇಂದು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ವೀಕ್ಷಣೆ ನಡೆಸಿ ಮುಂದಿನ ಒಂದು ವಾರದೊಳಗೆ ಮುಕ್ತಾಯಗೊಳಿಸುವಂತೆ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಮುಖ್ಯಸ್ಥ ಮತ್ತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಸೂಚನೆ ನೀಡಿದ್ದಾರೆ.
ಪಾದಚಾರಿ ಮಾರ್ಗಗಳು ಮತ್ತು ರಸ್ತೆಗಳಿಗೆ ಟಾರ್ ಹಾಕುವ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಿ, ರೋಗಿಗಳು ಬರಲು ಹೋಗಲು ತೊಂದರೆಯಾಗದಂತೆ ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಈ ಪರಿಶೀಲನೆಗೆ ಸ್ಮಾರ್ಟ್ ಸಿಟಿ ನಿಗಮದ ಎಂಡಿ ರಾಜೇಂದ್ರ ಚೋಳನ್, ಮುಖ್ಯ ಎಂಜಿನಿಯರ್ ವಿನಾಯಕ ಸೂಗೂರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ ರಸ್ತೆಗಳ ಕಾಮಗಾರಿ : ಇನ್ನು ಆಸ್ಪತ್ರೆಯ ಆವರಣದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಸುಸಜ್ಜಿತ ರಸ್ತೆಗಳನ್ನು ಅಭಿವೃದ್ಧಿಪಡಿಸಲು, ಪಾರ್ಕಿಂಗ್‌ಗೆ ವ್ಯವಸ್ಥೆ, ಫುಟ್‌ಪಾತ್ ಅಭಿವೃದ್ಧಿ, ಪ್ರವೇಶ ದ್ವಾರ ಮತ್ತು ಟ್ರಸ್ ನಿರ್ಮಾಣ ಸೇರಿದಂತೆ ಬೀದಿ ದೀಪ ಅಳವಡಿಸಲು ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ (BMCRI Mobility Plan Project) ಕಾಮಗಾರಿಯನ್ನು ರೂ.10.65 ಕೋಟಿಗಳ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಇದನ್ನೂ ಓದಿ : ನೂತನ ಪಿಂಚಣಿ ಯೋಜನೆ ಸರ್ಕಾರಿ ನೌಕರರಿಗೆ ಮಾರಕ: ಬಸವರಾಜ ಹೊರಟ್ಟಿ ಕಳವಳ