ಬೆಂಗಳೂರು: ನಂದಿನಿ ಲೇಔಟ್ನ ಪೊಲೀಸ್ ಇನ್ಸ್ಪೆಕ್ಟರ್ ರೋಹಿತ್, ಅನಾಥ ಶವದ ಅಂತ್ಯಸಂಸ್ಕಾರ ನೇರವೇರಿಸಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.
ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ 61 ವರ್ಷದ ಮಣಿ ಎಂಬುವರು ಕಳೆದ ಎರಡು ದಿನಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮೂಲತಃ ಕೇರಳದವರಾದ ಮಣಿ 20 ವರ್ಷಗಳಿಂದ ವಾಸ ನಗರಕ್ಕೆ ಬಂದು ನೆಲೆಸಿದ್ದರು. ಅವಿವಾಹಿತನಾಗಿದ್ದ ಇವರಿಗೆ ತನ್ನವರು ಎಂದು ಯಾರೂ ಇರಲಿಲ್ಲ. ಇವರು ಒಬ್ಬಂಟಿಯಾಗಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಸ್ಥಳೀಯರು ಇವರು ಸಾವನ್ನಪ್ಪಿರುವ ಬಗ್ಗೆ ಪೊಲೀಸರ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಸಂಬಂಧಿಕರು ಅಂತ ಹೇಳಿಕೊಳ್ಳಲು ಯಾರೂ ಇಲ್ಲ, ಆದ್ರೂ ಶವ ನೋಡಲು ಯಾರಾದ್ರೂ ಬರಬಹುದು ಎನ್ನುವ ನಿರೀಕ್ಷೆಯಿಂದ ಆಸ್ಪತ್ರೆಯಲ್ಲಿ ಮೃತದೇಹ ಇಟ್ಟಿದ್ದರು. ಆದರೆ ಯಾರೂ ಬಾರದ ಕಾರಣ ನಂದಿನಿ ಲೇಔಟ್ ಇನ್ಸ್ಪೆಕ್ಟರ್ ರೋಹಿತ್ ಸ್ವತಃ , ಸುಬೇದಾರ್ ಪಾಳ್ಯದಲ್ಲಿರುವ ಸ್ಮಶಾನದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನದೊಂದಿಗೆ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.