ಬೆಂಗಳೂರು: ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿರುವ ಸ್ಯಾಂಟ್ರೋ ರವಿ ವಿರುದ್ಧ ಆತನ ಪತ್ನಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ ಅಮಾನತುಗೊಳಿಸಿ ಡಿಜಿ & ಐಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ. ಸ್ಯಾಂಟ್ರೋ ರವಿಯ ಷಡ್ಯಂತ್ರದಿಂದ ಕಾಟನ್ ಪೇಟೆ ಠಾಣೆಯಲ್ಲಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು. ಮೈಸೂರಿನ ವಿಜಯ ನಗರ ಠಾಣೆಯಲ್ಲಿ ರವಿ ಪತ್ನಿ ನೀಡಿದ್ದ ದೂರಿನನ್ವಯ ಅಂದಿನ ಕಾಟನ್ ಪೇಟೆ ಇನ್ಸ್ಪೆಕ್ಟರ್ ಪ್ರವೀಣ್ ವಿರುದ್ಧ ಇಲಾಖಾ ತನಿಖೆ ನಡೆಸಿ ವರದಿ ನೀಡುವಂತೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿಗೆ ಆದೇಶಿಸಲಾಗಿತ್ತು. ಇಲಾಖಾ ತನಿಖೆಯ ವರದಿ ಕೈಸೇರುತ್ತಿದ್ದಂತೆ ಇನ್ಸ್ಪೆಕ್ಟರ್ ಪ್ರವೀಣ್ ಅವರನ್ನು ಅಮಾನತುಗೊಳಿಸಲಾಗಿದೆ.
ಡಿಜಿ & ಐಜಿಪಿಯ ಆದೇಶದಂತೆ ಇಲಾಖಾ ತನಿಖೆ ನಡೆಸಿದ್ದ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ, ಅಂದಿನ ಕಾಟನ್ ಪೇಟೆ ಇನ್ಸ್ಪೆಕ್ಟರ್ ಪ್ರವೀಣ್ ಸುಳ್ಳು ಎಫ್ಐಆರ್ ದಾಖಲಿಸಿರುವ ಬಗ್ಗೆ ವರದಿ ನೀಡಿದ್ದರು. ಸ್ಯಾಂಟ್ರೋ ರವಿಯ ಷಡ್ಯಂತ್ರಕ್ಕೆ ಸಾಥ್ ನೀಡಿದ್ದ ಕಾಟನ್ ಪೇಟೆ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಪ್ರವೀಣ್ ಅವರನ್ನು ಸದ್ಯ ಕರ್ತವ್ಯ ಲೋಪದ ಆರೋಪದಡಿ ಅಮಾನತು ಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕಾಶ್ ಎಂಬಾತನಿಂದ ಹಣ ಪಡೆದು, ಬಳಿಕ ಆತನನ್ನೇ ಬೆದರಿಸಿ 13ಗ್ರಾಂ ತೂಕದ ಚಿನ್ನದ ಸರ, ಪ್ಯಾಂಟ್ ಜೇಬಿನಲಿದ್ದ 9 ಸಾವಿರ ರೂಪಾಯಿಗಳನ್ನು ಕಿತ್ತುಕೊಂಡು ಹಲ್ಲೆ ಮಾಡಿ ಪರಾರಿಯಾಗಿದ್ದರು ಎಂಬ ಆರೋಪದಡಿ ರವಿ ಪತ್ನಿ ವಿರುದ್ಧ ಕಾಟನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಮ್ಮ ವಿರುದ್ಧ ಷಡ್ಯಂತ್ರ ನಡೆಸಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಸ್ಯಾಂಟ್ರೋ ರವಿ ಪತ್ನಿ ಮೈಸೂರು ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ಹಿನ್ನೆಲೆ ಏನು: ಪ್ರಕಾಶ್ ಎಂಬವರು ನೀಡಿದ್ದ ದೂರಿನನ್ವಯ ಕಾಟನ್ ಪೇಟೆ ಠಾಣೆಯಲ್ಲಿ ನವೆಂಬರ್ 24 ರಂದು ರಶ್ಮಿ, ನಯನ ಹಾಗೂ ಶೇಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು. 'ನನ್ನಿಂದ ಮೂರು ತಿಂಗಳ ಅವಧಿಗೆ ಐದು ಲಕ್ಷ ರೂಪಾಯಿ ಪಡೆದಿದ್ದ ರಶ್ಮಿ, ನವೆಂಬರ್ 23 ರಂದು ಸಂಜೆ 6 ಗಂಟೆಗೆ ಹಿಂತಿರುಗಿಸುವುದಾಗಿ ಕಾಟನ್ ಪೇಟೆಯ ಖೋಡೆ ಸರ್ಕಲ್ ಬಳಿ ಕರೆಸಿಕೊಂಡಿದ್ದರು. ಈ ವೇಳೆ, ರಶ್ಮಿ ಜೊತೆಗಿದ್ದ ಶೇಕ್ ಎಂಬಾತ ನನ್ನ ಎರಡೂ ಕೈಗಳನ್ನು ಹಿಂದಿನಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದು, ರಶ್ಮಿ ತಮ್ಮ ಬಳಿಯಿದ್ದ ಚಾಕುವನ್ನು ಕುತ್ತಿಗೆಯ ಮೇಲಿಟ್ಟು ಬೆದರಿಸಿದ್ದಾರೆ. ಅವರ ಜೊತೆಗಿದ್ದ ನಯನ ಎಂಬಾಕೆ ಕತ್ತಿನಲ್ಲಿದ್ದ ಸುಮಾರು 13 ಗ್ರಾಂ ತೂಕದ ಚಿನ್ನದ ಚೈನ್ ಮತ್ತು ಪ್ಯಾಂಟ್ ಜೇಬಿನಲಿದ್ದ 9 ಸಾವಿರ ರೂಪಾಯಿಗಳನ್ನು ಕಿತ್ತುಕೊಂಡು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ’‘ ಎಂದು ಪ್ರಕಾಶ್ ದೂರು ದಾಖಲಿಸಿದ್ದರು.
ವರದಿಯಲ್ಲಿರುವುದು ಏನು?: ಈ ಬಗ್ಗೆ ತನಿಖೆ ನಡೆಸಿರುವ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ, ’’ಕೃತ್ಯ ನಡೆದ ಸ್ಥಳದಲ್ಲಿ ರಶ್ಮಿ ಹಾಗೂ ನಯನ ಇರಲಿಲ್ಲ. ಆದರೆ, ಇರುವಂತೆ ಸಾಬೀತುಪಡಿಸಲು ಸ್ಯಾಂಟ್ರೋ ರವಿಯೇ ತನ್ನ ಕೆಲಸಗಾರ ಶೇಕ್ ಜೊತೆಯಲ್ಲಿ ರಶ್ಮಿ ಹಾಗೂ ನಯನಾಳ ಮೊಬೈಲ್ ಕೊಟ್ಟು ಕಳುಹಿಸಿದ್ದ. ಸೂಕ್ತ ತನಿಖೆ ನಡೆಸದೇ ಕಾಟನ್ ಪೇಟೆ ಇನ್ಸ್ಪೆಕ್ಟರ್ ಪ್ರವೀಣ್ ಸುಳ್ಳು ಎಫ್ಐಆರ್ ದಾಖಲಿಸಿದ್ದಾರೆ‘‘ ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ಗೆ ವರದಿ ನೀಡಿದ್ದರು. ಪ್ರಕರಣದಲ್ಲಿ ಸ್ಯಾಂಟ್ರೋ ರವಿಯ ಷಡ್ಯಂತ್ರದ ಜೊತೆಗೆ ಇನ್ಸ್ಪೆಕ್ಟರ್ ಪ್ರವೀಣ್ರ ಕರ್ತವ್ಯ ಲೋಪ ಎದ್ದು ಕಾಣುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ವರದಿಯಲ್ಲಿ ತಿಳಿಸಲಾಗಿತ್ತು.
ಸ್ಯಾಂಟ್ರೋ ರವಿ ಬಂಧನಕ್ಕೆ ನಾಲ್ಕು ತಂಡ ರಚನೆ: ತಲೆ ಮರೆಸಿಕೊಂಡಿರುವ ಸ್ಯಾಂಟ್ರೋ ರವಿ ಬಂಧನಕ್ಕೆ 3-4 ತಂಡ ರಚನೆ ಮಾಡಿದ್ದು, ಶೀಘ್ರವೇ ಆರೋಪಿಯನ್ನ ಬಂಧಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ಮೈಸೂರಿನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಇಂದು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರುದಾರೆ ಮತ್ತು ಅವರ ಸಹೋದರಿಯಿಂದ ಮಾಹಿತಿ ಪಡೆದ ಎಡಿಜಿಪಿ ಅಲೋಕ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಯಾಂಟ್ರೋ ರವಿ ವಿರುದ್ಧ ಕಳೆದ ಎಂಟು ದಿನಗಳ ಹಿಂದೆ ಮೈಸೂರಿನ ವಿಜಯನಗರದಲ್ಲಿ ಅತ್ಯಾಚಾರ ಮತ್ತು ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ಈ ಬಗ್ಗೆ ತನಿಖೆ ಆರಂಭವಾಗಿದೆ. ಸ್ಯಾಂಟ್ರೋ ರವಿ ಬಂಧನಕ್ಕೆ ಮೂರ್ನಾಲ್ಕು ತಂಡ ಕೆಲಸ ಮಾಡುತ್ತಿದೆ. ಆರೋಪಿ ತಲೆ ಮರೆಸಿಕೊಂಡಿದ್ದು, ಶೀಘ್ರವೇ ಆತನನ್ನ ಬಂಧಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:ಸ್ಯಾಂಟ್ರೋ ರವಿ ಷಡ್ಯಂತ್ರ ಬೆಂಬಲಿಸಿದ ಆರೋಪ: ಇನ್ಸ್ಪೆಕ್ಟರ್ ವಿರುದ್ಧ ಐಜಿಪಿಗೆ ವರದಿ