ಬೆಂಗಳೂರು: ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ವೈಜ್ಞಾನಿಕ ಸಂಶೋಧನೆಯಲ್ಲಿ ಗಮನಾರ್ಹ ಸಾಧನೆ ತೋರಿದ ಆರು ಜನರಿಗೆ ಇನ್ಫೋಸಿಸ್-2023 ಪ್ರಶಸ್ತಿಯನ್ನು ಬುಧವಾರ ಘೋಷಿಸಿದೆ. ಆರು ವಿಭಾಗಗಳಾದ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ, ಮಾನವಿಕ, ಜೀವ ವಿಜ್ಞಾನ, ಗಣಿತ ವಿಜ್ಞಾನ, ಭೌತಿಕ ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.
2008ರಿಂದ ಇನ್ಫೋಸಿಸ್ ಪ್ರತಿಷ್ಠಾನವು ವೈಜ್ಞಾನಿಕ ಸಂಶೋಧನೆಗಳಿಗೆ ಮನ್ನಣೆ ನೀಡಿದೆ. ಪ್ರತಿ ವಿಭಾಗದಲ್ಲಿ ನೀಡುವ ಪ್ರಶಸ್ತಿ ಚಿನ್ನದ ಪದಕ, ಪ್ರಶಂಸನಾ ಪತ್ರ ಮತ್ತು 1 ಲಕ್ಷ ಅಮೆರಿಕನ್ ಡಾಲರ್ (ರೂಪಾಯಿ ಲೆಕ್ಕದಲ್ಲಿ ಅದಕ್ಕೆ ಸಮನಾದ ಮೊತ್ತ) ನಗದನ್ನು ಒಳಗೊಂಡಿದೆ. ಜನವರಿ ತಿಂಗಳಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನ ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ನಲ್ಲಿ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರಶಸ್ತಿಗೆ ನಾಮನಿರ್ದೇಶಿತ ಆಗಿದ್ದ 224 ಹೆಸರುಗಳ ಪೈಕಿ, ಆರು ಮಂದಿಯನ್ನು ಅಂತಾರಾಷ್ಟ್ರೀಯ ತೀರ್ಪುಗಾರರ ಸಮಿತಿಯು ಅಂತಿಮಗೊಳಿಸಿದೆ. ಇನ್ಫೋಸಿಸ್ ಪ್ರಶಸ್ತಿಗೆ ಆಯ್ಕೆಯಾದವರ ಹೆಸರನ್ನು ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ಟ್ರಸ್ಟಿಗಳಾದ ಕ್ರಿಸ್ ಗೋಪಾಲಕೃಷ್ಣನ್, ಎನ್ ಆರ್ ನಾರಾಯಣ ಮೂರ್ತಿ, ಶ್ರೀನಾಥ್ ಬಾಟ್ನಿ, ಕೆ ದಿನೇಶ್, ಎಸ್ ಡಿ ಶಿಬುಲಾಲ್ ಅನುಮೋದಿಸಿದ್ದಾರೆ. ಇನ್ಫೋಸಿಸ್ ಸೈನ್ಸ್ ಫೌಂಡೇಷನ್‌ನ ಟ್ರಸ್ಟಿಗಳಾದ ನಂದನ್ ನಿಲೇಕಣಿ, ಮೋಹನದಾಸ್ ಪೈ ಮತ್ತು ಸಲೀಲ್ ಪಾರೇಖ್ ಅಭಿನಂದಿಸಿದ್ದಾರೆ.
ಆರು ವಿಭಾಗಗಳಲ್ಲಿ ಇನ್ಫೋಸಿಸ್ ಪ್ರಶಸ್ತಿ ಪುರಸ್ಕೃತರು: ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಐಐಟಿ–ಕಾನ್ಪುರದ ಸುಸ್ಥಿರ ಇಂಧನ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಸಚ್ಚಿದಾನಂದ ತ್ರಿಪಾಠಿ ಅವರಿಗೆ ಇನ್ಫೋಸಿಸ್-2023 ಪ್ರಶಸ್ತಿ ಘೋಷಿಸಲಾಗಿದೆ. ಸೆನ್ಸಾರ್ ಆಧಾರಿತ ವಾಯುಗುಣಮಟ್ಟ ಜಾಲವನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಕೆ ಕುರಿತಾಗಿ ಇವರು ಸಂಶೋಧನೆ ಕೈಗೊಂಡಿದ್ದಾರೆ.
ಮಾನವಿಕ ವಿಭಾಗದಲ್ಲಿ ಜಾಹ್ನವಿ ಫಾಲ್ಕೆ ಅವರಿಗೆ ಇನ್ಫೋಸಿಸ್ ಪ್ರಶಸ್ತಿ 2023 ಸಂದಿದೆ. ಜಾಹ್ನವಿ ಅವರು ಸೈನ್ಸ್ ಗ್ಯಾಲರಿ ಬೆಂಗಳೂರು ಇದರ ಸಂಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ಆಧುನಿಕ ಭಾರತದ ವೈಯಕ್ತಿಕ, ಸಾಂಸ್ಥಿಕ ಹಾಗೂ ಭೌತಿಕ ವಸ್ತುಗಳ ವೈಜ್ಞಾನಿಕ ಸಂಶೋಧನೆಗಳ ಇತಿಹಾಸದ ವಿಚಾರದಲ್ಲಿ ಸಂಶೋಧನೆ ಕೈಗೊಂಡಿದ್ದಾರೆ.
ಜೀವವಿಜ್ಞಾನ ವಿಭಾಗದಲ್ಲಿ ಐಐಟಿ–ಕಾನ್ಪುರದ ಬಯೋ ಎಂಜಿನಿಯರಿಂಗ್ ಮತ್ತು ಜೀವವಿಜ್ಞಾನ ಪ್ರೊಫೆಸರ್ ಅರುಣ್ ಕುಮಾರ್ ಶುಕ್ಲಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜಿ–ಪ್ರೊಟೀನ್ ಕಪಲ್ಡ್ ರಿಸೆಪ್ಟರ್ (ಜಿಪಿಸಿಆರ್) ಜೀವವಿಜ್ಞಾನಕ್ಕೆ ಸಂಶೋಧನೆ ಕೈಗೊಂಡಿದ್ದಾರೆ.
ಗಣಿತ ವಿಜ್ಞಾನ ವಿಭಾಗದಲ್ಲಿ ಇನ್ಫೋಸಿಸ್ ಪ್ರಶಸ್ತಿಯನ್ನು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ ಹಾಗೂ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿ ಜಾಯಿಂಟ್ ಪ್ರೊಫೆಸರ್ ಆಗಿರುವ ಭಾರ್ಗವ್ ಭಟ್ ಅವರಿಗೆ ನೀಡಲಾಗಿದೆ. ಪ್ರೊ. ಭಟ್ ಅವರು ಜರ್ಮನಿಯ ಗಣಿತಶಾಸ್ತ್ರಜ್ಞ ಪೀಟರ್ ಶಾಲ್ಜ್ ಜೊತೆ ಸೇರಿ ಪ್ರಿಸ್ಮ್ಯಾಟಿಕ್ ಕೊಹೊಮಾಲಜಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಭೌತ ವಿಜ್ಞಾನ ವಿಭಾಗದಲ್ಲಿ ನ್ಯಾಷನಲ್ ಸೆಂಟರ್ ಫಾರ್ ಬಯೊಲಾಜಿಕಲ್ ಸೈನ್ಸಸ್‌ನ ಜೀವರಸಾಯನಶಾಸ್ತ್ರ, ಜೀವಭೌತವಿಜ್ಞಾನ ಮತ್ತು ಬಯೋಇನ್ಫಾರ್ಮೆಟಿಕ್ಸ್ ವಿಭಾಗದ ಪ್ರೊಫೆಸರ್ ಮುಕುಂದ್ ಥಟ್ಟೈ ಅವರನ್ನು ಇನ್ಫೋಸಿಸ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಕಾಸಾತ್ಮಕ ಜೀವಕೋಶ ಜೀವ ವಿಜ್ಞಾನದಲ್ಲಿ ಸಂಶೋಧನಾ ಕಾರ್ಯ ನಡೆಸುತ್ತಿದ್ದಾರೆ.
ಸಮಾಜ ವಿಜ್ಞಾನ ವಿಭಾಗದಲ್ಲಿ ಕೊಲಂಬಿಯಾ ವಿವಿಯ ರಾಜ್ಯಶಾಸ್ತ್ರದ ಪ್ರೊಫೆಸರ್ ಕರುಣಾ ಮಂತೆನಾ ಅವರನ್ನು ಆಯ್ಕೆ ಮಾಡಲಾಗಿದೆ. ಸಾಮ್ರಾಜ್ಯಶಾಹಿ ಸಿದ್ಧಾಂತವು ಆಧುನಿಕ ಸಾಮಾಜಿಕ ಸಿದ್ಧಾಂತದ ಉಗಮದಲ್ಲಿ ಅತ್ಯಂತ ಪ್ರಮುಖ ಅಂಶ ಎಂಬುದರ ಕುರಿತು ಅವರು ಸಂಶೋಧನೆ ಕೈಗೊಂಡಿದ್ದಾರೆ.
ಇದನ್ನೂಓದಿ:ದಕ್ಷಿಣ ಕೊರಿಯಾದ ವೀಕ್ಷಣಾ ಉಪಗ್ರಹ 'ಅಬ್ಸರ್ವರ್ -1ಎ' ಯಶಸ್ವಿಯಾಗಿ ಕಕ್ಷೆಗೆ ಸೇರ್ಪಡೆ