ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಅನರ್ಹ ಶಾಸಕ ರೋಷನ್ ಬೇಗ್ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುವ ಕುರಿತು ಸಮಾಲೋಚನೆ ನಡೆಸಿದರು.
ನಾಮಪತ್ರ ಸಲ್ಲಿಕೆ ದಿನ ಮುಕ್ತಾಯಗೊಂಡ ನಂತರ ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸ ಧವಳಗಿರಿಗೆ ಶಿವಾಜಿನಗರ ಕ್ಷೇತ್ರದ ಅನರ್ಹ ಶಾಸಕ ರೋಷನ್ ಬೇಗ್ ಆಗಮಿಸಿದರು. ಈ ವೇಳೆ ಅವರು ಸಿಎಂ ಜೊತೆ ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ನಾಮಪತ್ರ ಸಲ್ಲಿಕೆ ಮಾಡದೇ ಚುನಾವಣಾ ಕಣದಿಂದ ಬೇಗ್ ದೂರ ಉಳಿದಿರುವ ಕಾರಣ ಇಂದಿನ ಭೇಟಿ ಮಹತ್ವ ಪಡೆದುಕೊಂಡಿದೆ.
ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರವಣ ಗೆಲುವಿಗೆ ಸಹಕಾರ ನೀಡುವಂತೆ ಅನರ್ಹ ಶಾಸಕ ರೋಷನ್ ಬೇಗ್ ಅವರಿಗೆ ಸಿಎಂ ಮನವಿ ಮಾಡಿದ್ದು ಇದಕ್ಕೆ ಬೇಗ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಿಜೆಪಿ ಪರ ಚುನಾವಣೆಯಲ್ಲಿ ಕೆಲಸ ಮಾಡಲು ಸಮ್ಮತಿಸಿದ್ದಾರೆ ಎನ್ನುವ ಮಾತುಗಳು ಸಿಎಂ ನಿವಾಸದಿಂದ ಕೇಳಿ ಬಂದಿವೆ.
ಪುತ್ರನಿಗಾಗಿ ತನ್ನ ರಾಜಕೀಯ ಭವಿಷ್ಯ ತ್ಯಾಗ ಮಾಡುತ್ತಿದ್ದಾರಾ ರೋಷನ್ ಬೇಗ್?
ಪುತ್ರ ರುಮಾನ್ ಬೇಗ್ ರಾಜಕೀಯ ಭವಿಷ್ಯಕ್ಕಾಗಿ ರೋಷನ್ ಬೇಗ್ ಬಿಜೆಪಿ ಜೊತೆ ಕೈ ಜೋಡಿಸಲು ನಿರ್ಧರಿಸಿದ್ದಾರೆ. ಭವಿಷ್ಯದಲ್ಲಿ ಪುತ್ರ ರುಮಾನ್‌ಗೆ ರಾಜಕೀಯ ಸ್ಥಾನಮಾನ ನೀಡಿ ರಾಜಕೀಯವಾಗಿ ಬೆಳೆಯಲು ಸಹಕಾರ ನೀಡಬೇಕು ಎನ್ನುವ ಕುರಿತು ಬೇಗ್ ಸಿಎಂ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿಕ್ರಿಯೆಗೆ ನಕಾರ
ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ರೋಷನ್ ಬೇಗ್ ನಿರಾಕರಿಸಿದರು.