ಬೆಂಗಳೂರು: ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಆರ್ಥಿಕವಾಗಿ ಸಬಲರಾಗಿರುವವರು ಪಡೆದಿದ್ದ 3,17,441 ಬಿಪಿಎಲ್ ಪಡಿತರ ಚೀಟಿಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಳೆದ ಒಂದೂವರೆ ವರ್ಷದಿಂದ ರದ್ದುಪಡಿಸುತ್ತಿದೆ. ಇಂಥ ಅನರ್ಹರಿಂದ 11. 91 ಕೋಟಿ ರೂ. ದಂಡವನ್ನೂ ವಸೂಲಿ ಮಾಡಲಾಗಿದೆ.
ಆರ್ಥಿಕವಾಗಿ ಸಬಲರಾಗಿರುವವರೂ ಪಡಿತರ ಚೀಟಿ ಪಡೆದು ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗ ಮಾಡುತ್ತಿದ್ದಾರೆ. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರು, ವಾರ್ಷಿಕ 1.20ಲಕ್ಷ ರೂ. ಆದಾಯ ಗಳಿಸುವವರು, ಮೂರು ಹೆಕ್ಟೇರ್‌ಗಿಂತ ಹೆಚ್ಚು ಭೂಮಿ ಹೊಂದಿದವರು ಹಾಗೂ ಕಾರು ಮಾಲೀಕರು ಅಂತ್ಯೋದಯ ಹಾಗೂ ಆದ್ಯತಾ ಪಟ್ಟಿಯಲ್ಲಿರುವ ಕುಟುಂಬಗಳ (ಬಿಪಿಎಲ್) ಪಡಿತರ ಚೀಟಿ ಹೊಂದುವಂತಿಲ್ಲ.
ಹೀಗಿದ್ರೂ ಸುಳ್ಳು ಮಾಹಿತಿ ನೀಡಿ ಲಕ್ಷಾಂತರ ಮಂದಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಇಂಥವರು ಸ್ವಯಂಪ್ರೇರಿತವಾಗಿ ಪಡಿತರ ಚೀಟಿಯನ್ನು ಒಪ್ಪಿಸುವಂತೆ ಸರ್ಕಾರ ಗಡುವು ನೀಡಿತ್ತು. ಸರ್ಕಾರದ ಸೂಚನೆ ಪಾಲಿಸಿ ಪಡಿತರ ಚೀಟಿಯನ್ನು ಒಪ್ಪಿಸಿದವರು ವಿರಳ. ಹೀಗಾಗಿ, ಅನರ್ಹ ಚೀಟಿಗಳ ಪತ್ತೆಗೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿದ್ದಾರೆ.
ದಂಡ ವಸೂಲಿ: ಸ್ವಯಂಪ್ರೇರಿತವಾಗಿ ಬಿಪಿಎಲ್ ಕಾರ್ಡ್ ಒಪ್ಪಿಸಿದವರಿಗೆ ಎಪಿಎಲ್ ಕಾರ್ಡ್ ನೀಡಲಾಗಿದೆ. ಮಾಹಿತಿ ಬಚ್ಚಿಟ್ಟವರನ್ನು ಪತ್ತೆ ಮಾಡಿ ಅವರ ವಿರುದ್ಧ ದಂಡದ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಬಿಪಿಎಲ್ ಚೀಟಿ ಹೊಂದಿದ ಅನರ್ಹರ ಕುಟುಂಬಕ್ಕೆ ಪ್ರಾಥಮಿಕ ಹಂತದಲ್ಲಿ ನೋಟಿಸ್ ನೀಡಲಾಗುತ್ತಿದೆ. ಸೌಲಭ್ಯವನ್ನು ದುರುಪಯೋಗ ಮಾಡಿಕೊಂಡ ಹಿನ್ನೆಲೆ ಅವರಿಂದ ದಂಡ ವಸೂಲಿ ಮಾಡಲಾಗುತ್ತಿದೆ.
17,338 ಸರ್ಕಾರಿ ನೌಕರರ ಬಿಪಿಎಲ್ ರದ್ದು: ಕಳೆದ ಒಂದೂವರೆ ವರ್ಷದಿಂದ ಒಟ್ಟು 17,338 ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ನನ್ನು ರದ್ದುಪಡಿಸಲಾಗಿದೆ. ಸರ್ಕಾರಿ ನೌಕರರು ಸುಳ್ಳು ಮಾಹಿತಿ ನೀಡಿ, ಬಿಪಿಎಲ್ ಕಾರ್ಡ್ ಪಡೆದಿರುವುದು ಪತ್ತೆಯಾಗಿದೆ. 2022-23ಸಾಲಿನಲ್ಲಿ ಏಪ್ರಿಲ್ನಿಂದ ಜೂನ್ವರೆಗೆ 772 ಸರ್ಕಾರಿ ನೌಕರರ ಅಕ್ರಮ ಬಿಪಿಎಲ್ ಕಾರ್ಡನ್ನು ರದ್ದು ಪಡಿಸಲಾಗಿದೆ.
ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಹೊಂದಿದ 4 ಚಕ್ರ ವಾಹನಗಳ ವಾರಸುದಾರರಿಗೆ ಕಾದಿದೆ ಸಂಕಷ್ಟ!
ಆರ್ಥಿಕವಾಗಿ ಸ್ಥಿತಿವಂತರಾಗಿರುವ ಸರ್ಕಾರಿ ನೌಕರರೇ ಬಿಪಿಎಲ್ ಕಾರ್ಡ್ ಪಡೆದು ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಪಡಿಸುತ್ತಿದ್ದಾರೆ. ಅಕ್ರಮವಾಗಿ ಬಿಪಿಎಲ್ ಪಡೆದ 17,338 ಸರ್ಕಾರಿ ನೌಕರರಿಂದ ಕಳೆದ ಒಂದೂವರೆ ವರ್ಷದಿಂದ 10.16 ಕೋಟಿ ರೂ.ದಂಡ ವಸೂಲಿ ಮಾಡಿರುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಂಕಿಅಂಶ ನೀಡಿದೆ.
ರದ್ದಾದ ಅನರ್ಹ ಬಿಪಿಎಲ್ಗಳೆಷ್ಟು?: ರಾಜ್ಯಾದ್ಯಂತ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಆರ್ಥಿಕವಾಗಿ ಸಬಲರು ಪಡೆದಿದ್ದ, 3,17,441 ಬಿಪಿಎಲ್ ಪಡಿತರ ಚೀಟಿಗಳನ್ನು ಒಂದೂವರೆ ವರ್ಷದಿಂದ ರದ್ದು ಮಾಡಲಾಗಿದೆ. 2022-23 ಸಾಲಿನಲ್ಲಿ ಈವರೆಗೆ 15,511 ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲಾಗಿದೆ.
ಆದಾಯ ತೆರಿಗೆ (ಐಟಿ) ಪಾವತಿಸಿದವರಿಂದ ಒಟ್ಟು 85,195 ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲಾಗಿದೆ. ಮೂರು ಹೆಕ್ಟೇರ್‌ಗಿಂತ ಹೆಚ್ಚು ಭೂಮಿ ಹೊಂದಿದವರಿಂದ 1,21,914 ಅನರ್ಹ ಪಡಿತರ ಚೀಟಿ ರದ್ದು ಪಡಿಸಲಾಗಿದೆ. ವಾರ್ಷಿಕ 1.20ಲಕ್ಷ ರೂ. ಆದಾಯ ಗಳಿಸಿದವರಿಂದ ಅನರ್ಹ 23,563 ಬಿಪಿಎಲ್ ಪಡಿತರ ಚೀಟಿ ರದ್ದಾಗಿದೆ.