ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯ ಸ್ಮರಣೆ ಸಂದರ್ಭ ಗೌರವ ನಮನ ಸಲ್ಲಿಸಿದ್ದು, ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನವನ್ನು ಗೌರವಪೂರ್ವಕವಾಗಿ ನೆನೆದಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮತ್ತಿತರ ನಾಯಕರು ಇಬ್ಬರೂ ರಾಷ್ಟ್ರ ನಾಯಕರ ಗುಣಗಾನವನ್ನು ಟ್ವೀಟ್ ಮೂಲಕ ಮಾಡಿದ್ದಾರೆ. ಭಾರತದ ಪ್ರಧಾನಮಂತ್ರಿಗಳಾಗಿ ಹಲವು ಕ್ರಾಂತಿಕಾರಕ ಯೋಜನೆಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದ, 'ಭಾರತೀಯ ರಾಷ್ಟ್ರೀಯ ಕಾಂಗ್ರೆಸ್' ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ, ಭಾರತದ ಮೊದಲ ಮಹಿಳಾ ಪ್ರಧಾನಿ, ಉಕ್ಕಿನ ಮಹಿಳೆ, 'ಭಾರತ ರತ್ನ' ಇಂದಿರಾ ಗಾಂಧಿ ಪುಣ್ಯಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ ಎಂದಿದ್ದಾರೆ.
ಅದೇ ರೀತಿ ರಾಷ್ಟ್ರೀಯ ಕಾಂಗ್ರೆಸ್ನ 49ನೇ ಅಧ್ಯಕ್ಷರಾಗಿ, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ನಾಯಕತ್ವ ವಹಿಸಿದ್ದ ಭಾರತ ಗಣರಾಜ್ಯ ಸ್ಥಾಪನೆ, ಏಕೀಕರಣದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ, ದೇಶದ ಮೊದಲ ಉಪ ಪ್ರಧಾನಿ, ಉಕ್ಕಿನ ಮನುಷ್ಯ 'ಭಾರತ ರತ್ನ' ಸರ್ದಾರ್ ವಲ್ಲಭಭಾಯ್ ಪಟೇಲ್ರ ಜನ್ಮದಿನದಂದು ಗೌರವ ಪೂರ್ವಕವಾಗಿ ನೆನೆಯುತ್ತೇವೆ ಎಂದಿದ್ದಾರೆ. ಇಬ್ಬರು ನಾಯಕರಿಗೆ ಗೌರವ ಸಲ್ಲಿಸುವ ವಿಶೇಷ ಕಾರ್ಯಕ್ರಮವನ್ನು ಕೂಡ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದು, ಇದರಲ್ಲಿ ರಾಜ್ಯದ ಎಲ್ಲಾ ನಾಯಕರು ಪಾಲ್ಗೊಳ್ಳುತ್ತಿದ್ದಾರೆ.