ಬೆಂಗಳೂರು:ಇಂದಿರಾ ಕ್ಯಾಂಟೀನ್ ಆಹಾರದ ಗುಣಮಟ್ಟದ ಬಗ್ಗೆ ದೂರು ಕೇಳಿ ಬಂದ ಹಿನ್ನಲೆ ಡಿಸಿಎಂ ಪರಮೇಶ್ವರ್ ಇಂದು ಪರಿಶೀಲನೆ ನಡೆಸಿದರು.
ನಾಯಂಡಹಳ್ಳಿಯಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ, ಗ್ರಾಹಕನ ತಟ್ಟೆಯಿಂದಲೇ ಇಡ್ಲಿ ತಿಂದು, ರುಚಿ ಹೇಗಿದ್ಯಪ್ಪಾ, ಏನಾದ್ರೂ ದೂರು ಇದೆಯಾ ಎಂದು ಕೇಳಿದ್ರು. ಈ ವೇಳೆ ಸ್ಥಳೀಯರು ನೀವು ಬಂದಿರೋದಕ್ಕೆ ಸ್ವಚ್ಛವಾಗಿ ಇಟ್ಟಿದ್ದಾರೆ. ಇಲ್ಲದಿದ್ರೆ ಕೊಳೆಯಿಂದ ತುಂಬಿರುತ್ತೆ. ನೀವ್ ಹೇಳದೇ ಕ್ಯಾಂಟೀನ್ ಬರಬೇಕಿತ್ತು. ಇಲ್ಲಿ ಯಾರು ಊಟ ತಿನ್ನಲ್ಲ. ಊಟ ಬರೀ ನೀರು ನೀರಾಗಿ ಇರುತ್ತೆ. ಸಾಂಬಾರ್ ಗೆ ಬರೀ ಖಾರದ ಪುಡಿ ಹಾಕಿ ಕೊಡ್ತಾರೆ ಎಂದು ಡಿಸಿಎಂಗೆ ದೂರು ನೀಡಿದ್ರು.
ಬಳಿಕ ದೀಪಾಂಜಲಿ ನಗರ, ನಾಯಂಡನಹಳ್ಳಿ, ವಿಜಯನಗರ, ದಾಸಪ್ಪ ಜಂಕ್ಷನ್ ಇಂದಿರಾ ಕ್ಯಾಂಟೀನ್ಗೆ ತೆರಳಿ ಆಹಾರದ ಶುಚಿ -ರುಚಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಪರಮೇಶ್ವರ್, ಈಗಾಗಲೇ 33 ಕಡೆ ಸ್ಯಾಂಪಲ್ಗಳನ್ನು ಸಂಗ್ರಹಿಸಿ ದಾಸಪ್ಪ , ಪಿಹೆಚ್ಐ, ಎನ್ಎಬಿಎ ಇತರೆ ಲ್ಯಾಬೋರೇಟರ್ಗೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಆಹಾರದ ಗುಣಮಟ್ಟದ ಬಗ್ಗೆ ಇರುವ ಗೊಂದಲ ನಿವಾರಣೆಯಾಗಲಿದೆ. ಕ್ಯಾಂಟೀನ್ನಲ್ಲಿ ಶುಚಿತ್ವ ಇಲ್ಲದ ಕಡೆ ಶುಚಿತ್ವ ಕಾಪಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.
ಕ್ಯಾಂಟೀನ್ ಆಹಾರದ ಬಗ್ಗೆ ಹೆಚ್ಚು ದೂರು ಕೇಳಿ ಬಂದರೆ ಈಗ ನೀಡಿರುವ ಟೆಂಡರ್ ಗಳನ್ನು ರದ್ದುಪಡಿಸಿ ಹೊಸಬರಿಗೆ ಟೆಂಡರ್ ನೀಡಲಾಗುತ್ತದೆ ಎಂದು ಡಿಸಿಎಂ ತಿಳಿಸಿದರು.