ಬೆಂಗಳೂರು: 73ನೇ ಸ್ವಾತಂತ್ರ ದಿನದ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನಂತರ ಮಾತನಾಡಿದ ದಿನೇಶ್ ಗುಂಡೂರಾವ್, ಇವತ್ತು ಭಯದ ವಾತಾವರಣ, ವೈಷಮ್ಯ ಹೆಚ್ಚುತ್ತಿದೆ. ಕೇಂದ್ರ ಸರ್ಕಾರ ಭಾವಾನಾತ್ಮಕ, ಸುಳ್ಳಿನ ದಾಖಲೆಗಳನ್ನು ಇಟ್ಟುಕೊಂಡು ರಾಜಕೀಯ ಮಾಡ್ತಿದೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹೋಗುತ್ತಿದೆ. ಜನರ ಟೀಕೆ ಟಿಪ್ಪಣಿಗಳನ್ನೇ ದಮನ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದಿಂದ ತನ್ನ ವಿರುದ್ಧವಾಗಿರುವ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ನಡೀತಿದೆ. ಕೋಮುವಾದ ಇಂದು ಈ ದೇಶವನ್ನ ಮುನ್ನಡೆಸುತ್ತಿದೆ. ದೇಶ ಈಗ ಗಂಭೀರ ಪರಿಸ್ಥಿತಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಂಸದ ವೀರಪ್ಪ ಮೊಯ್ಲಿ ಮಾಜಿ ಸಚಿವ ಆಂಜನೇಯ ಮತ್ತಿತರ ನಾಯಕರು ಉಪಸ್ಥಿತರಿದ್ದರು.