ಬೆಂಗಳೂರು : ರಾಜ್ಯ ಸರ್ಕಾರ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಎಂದಿನಂತೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಗ್ರೌಂಡ್‌ನಲ್ಲಿ ನಡೆಸಲು ನಿರ್ಧರಿಸಿದೆ. ಕೋವಿಡ್ ಹಿನ್ನೆಲೆ ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ರಾಜ್ಯ ಸರ್ಕಾರ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಚರಿಸುವ ಬದಲು ವಿಧಾನಸೌಧಕ್ಕೆ ಶಿಫ್ಟ್ ಮಾಡುವ ಚಿಂತನೆ ನಡೆಸಿತ್ತು. ಸರಳ ಸ್ವಾತಂತ್ರ್ಯ ದಿನ ಆಚರಿಸುವ ಹಿನ್ನೆಲೆ ವಿಧಾನಸೌಧದ ಆವರಣದಲ್ಲಿ ಸರಳವಾಗಿ ಸ್ವಾತಂತ್ರೋತ್ಸವ ನಡೆಸುವ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದ್ದರು.
ರಾಜ್ಯ ಸರ್ಕಾರ ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ವಿಜ್ರಂಭಣೆಯಿಂದ ಆಚರಿಸುತ್ತದೆ. ಸಿಎಂ ಧ್ವಜಾರೋಹಣ ಮಾಡುವ ಮೂಲಕ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಪ್ರತಿ ಬಾರಿಯೂ ಅದ್ದೂರಿಯಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಗ್ರೌಂಡ್‌ನಲ್ಲಿ ನೆರವೇರಿಸಲಾಗುತ್ತದೆ.
ಕೋವಿಡ್ ಆತಂಕದ ಹಿನ್ನೆಲೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಮಾಣಿಕ್ ಷಾ ಪರೇಡ್ ಗ್ರೌಂಡ್ ಬದಲು ವಿಧಾನಸೌಧದ ಗ್ರಾಂಡ್ ಸ್ಟೆಫ್‌ಗಳ ಮುಂದೆ ನೆರವೇರಿಸುವ ಬಗ್ಗೆ ಮೊದಲ ಸುತ್ತಿನ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆದಿತ್ತು.
ಆದರೆ, ಇದೀಗ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಮತ್ತೊಂದು ಸುತ್ತಿನ ಅಧಿಕಾರಿಗಳ ಸಭೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಎಂದಿನಂತೆ ಮಾಣಿಕ್ ಷಾ ಪರೇಡ್ ಗ್ರೌಂಡ್‌ನಲ್ಲಿ ಮಾಡಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಇದನ್ನೂ ಓದಿ : ಸಿಎಂ ಸಚಿವಾಲಯದಲ್ಲಿ ನಿಯೋಜನೆಗೊಂಡಿದ್ದ 19 ಅಧಿಕಾರಿಗಳಿಗೆ ಕಾರ್ಯ ಮುಕ್ತಗೊಳಿಸಿ ಆದೇಶ
ಕೋವಿಡ್ ಹಿನ್ನೆಲೆ ಕಳೆದ ವರ್ಷದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಕಳೆದ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ, ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಕಡಿಮೆ ಪ್ರಮಾಣದಲ್ಲಿ ಗೌರವ ವಂದನೆ ತುಕಡಿ ಭಾಗವಹಿಸಿತ್ತು. ನಿಯಮಿತ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ಬಾರಿನೂ ಕೋವಿಡ್ ಹಿನ್ನೆಲೆ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ವಯ ಸರಳ ಸ್ವಾತಂತ್ರ್ಯ ದಿನಾಚರಣೆ ಆಯೋಜಿಸಲು ತೀರ್ಮಾನಿಸಲಾಗಿದೆ.