ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಎಷ್ಟೇ ನಿರ್ಬಂಧಗಳನ್ನ ವಿಧಿಸಿದ್ರೂ ಕೋವಿಡ್ ಹರಡುವಿಕೆ ಮಾತ್ರ ಶರವೇಗದಲ್ಲಿ ಹೆಚ್ಚಾಗುತ್ತಿದೆ.
ಜನವರಿ ಆರಂಭದಿಂದಲೇ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಶುರುವಾಗಿದೆ. ಆರಂಭದಲ್ಲಿ 9416 ರಷ್ಟಿದ್ದ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಹತ್ತು ದಿನದ ಅಂತರದಲ್ಲಿ 60,148 ಕ್ಕೆ ಏರಿಕೆಯಾಗಿದೆ. ಇನ್ನು 7 ದಿನಗಳ ಪಾಸಿಟಿವ್ ಪ್ರಕರಣ 4891 ರಿಂದ 52,809 ಕ್ಕೆ ಏರಿಕೆಯಾಗಿರುವುದು ಆತಂಕ ಮೂಡಿಸಿದೆ.
ರಾಜ್ಯ ವಾರ್ ರೂಂ ಕೊಡುವ ಅಂಕಿ-ಅಂಶಗಳ ಪ್ರಕಾರ, 10 ದಿನಗಳಲ್ಲಿ ಕೋವಿಡ್ ಪ್ರಕರಣಗಳ ಏರಿಕೆಯಾದ ಪ್ರಮಾಣ ಈ ಕೆಳಗಿನಂತಿದೆ. ಈ ಅಂಕಿ ಅಂಶವು 7 ದಿನಗಳ ಒಟ್ಟು ಪ್ರಮಾಣವನ್ನು ಒಳಗೊಂಡಿದೆ.
ಜನವರಿ 1ರಿಂದ 10ರವರೆಗೆ ಕೋವಿಡ್ ಪ್ರಮಾಣ:
ಪಾಸಿಟಿವ್ - 4891 ರಿಂದ 52,809ಕ್ಕೆ ಏರಿಕೆ
ಗುಣಮುಖ- 2023 ರಿಂದ 3983
ಮರಣ - 27 ರಿಂದ 23
ಸಕ್ರಿಯ - 9416 ರಿಂದ 60,148
(24ಗಂಟೆಗಳಲ್ಲಿ)
ಪಾಸಿಟಿವ್- 1217 - 11,698
ಮರಣ- 3 - 4
ಗುಣಮುಖ- ಶೇ. 41.36 - ಶೇ.7.54
ಇಂದು (ಜ.11) ಒಂದೇ ದಿನ ರಾಜ್ಯದಲ್ಲಿ 14,473 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಬೆಂಗಳೂರಲ್ಲಿ 10,800 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕೋವಿಡ್ನಿಂದ ಐವರು ಮೃತಪಟ್ಟಿದ್ದು, ಈ ಪೈಕಿ ಮೂವರು ಬೆಂಗಳೂರಿನವರಾಗಿದ್ದಾರೆ. ಪಾಸಿಟಿವಿಟಿ ಪ್ರಮಾಣ ಶೇ.10ನ್ನು ದಾಟಿದೆ. 1356 ಜನ ಇಂದು ಗುಣಮುಖರಾಗಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 73,260ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಕೋವಿಡ್ ಕೇಸ್ ಪತ್ತೆ: ಶೇ.10 ದಾಟಿತು ಪಾಸಿಟಿವಿಟಿ ರೇಟ್, ಬೆಂಗಳೂರಿಗೆ ಆಘಾತ!
ವಾರದ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ, ಪ್ರಮುಖ ಬೀದಿಗಳಲ್ಲಿ ಉಂಟಾಗುವ ಜನದಟ್ಟಣೆಯೇ ಇದಕ್ಕೆ ಕಾರಣ ಎನ್ನಲಾಗ್ತಿದೆ. ಶಾಲಾ, ಕಾಲೇಜುಗಳಿಗೆ ಆಫ್ಲೈನ್ ತರಗತಿ ಬಂದ್ ಮಾಡಿದ್ದು, ಹೋಟೆಲ್, ರೆಸ್ಟೋರೆಂಟ್, ಮಾಲ್ ಮೊದಲಾದ ಕಡೆ ಶೇ.50ರಷ್ಟು ಜನರು ಬರಲು ಅವಕಾಶ ಮಾಡಿಕೊಡಲಾಗಿದೆ. ಕೋವಿಡ್ ಹರಡುವಿಕೆ ವೇಗಕ್ಕೆ ಸ್ವಲ್ಪ ತಡೆಯಾಗಿದ್ದರೂ, ಪ್ರಕರಣಗಳ ಸಂಖ್ಯೆ ಮಾತ್ರ ಏರುಮುಖವಾಗಿದೆ. ಪ್ರಮುಖವಾಗಿ ರಾಜ್ಯದ ಹಲವೆಡೆ ನಡೆಯುತ್ತಿರುವ ಜಾತ್ರೆ, ಸಮಾರಂಭಗಳು, ಱಲಿಗಳಿಗೆ ಇನ್ನೂ ತಡೆ ಬಿದ್ದಿಲ್ಲದಿರುವುದೂ ಇದಕ್ಕೆ ಕಾರಣವಾಗಿದೆ.
ಆದರೆ ಕೋವಿಡ್ ಪ್ರಮಾಣದಲ್ಲಿ ಎಷ್ಟೇ ಏರಿಕೆಯಾಗಿದ್ದರೂ, ಆಸ್ಪತ್ರೆ ಸೇರುವವರ ಪ್ರಮಾಣ, ಆಮ್ಲಜನಕದ ಅಗತ್ಯತೆ ಹಾಗೂ ಮರಣ ಪ್ರಮಾಣ ಇನ್ನೂ ನಿಯಂತ್ರಣದಲ್ಲಿರುವುದು ನಿಟ್ಟುಸಿರುಬಿಡುವಂತೆ ಮಾಡಿದೆ.