ಬೆಂಗಳೂರು: ಜಗತ್ತು ಅಂದುಕೊಂಡದ್ದಕ್ಕಿಂತಲೂ ಹೆಚ್ಚು ಬೆಳವಣಿಗೆ ಕಂಡಿರುವುದು ಗೊತ್ತೇ ಇದೆ. ಇಂಟರ್ನೆಟ್, ಇ-ಮೇಲ್, ಇ-ವ್ಯಾಲೆಟ್, ಫೇಸ್ಬುಕ್, ವ್ಯಾಟ್ಸ್ ಆ್ಯಪ್, ಇನ್ಸ್ಟಾಗ್ರಾಂ, ಟ್ವಿಟರ್, ಆನ್ಲೈನ್ ಪೇಮೆಂಟ್ಗಳ ಜಾಸ್ತಿ ಬಳಕೆಯಿಂದ ವಂಚನೆ ಪ್ರಕರಣಗಳು ರಾಕೆಟ್ ವೇಗದಂತೆ ಮುನ್ನುಗ್ಗುತ್ತಿವೆ.
ಸೈಬರ್ ಖದೀಮರು ಎಲ್ಲೋ ಕುಳಿತು ಬ್ಯಾಂಕ್ಗಳ ಖಾತೆಗಳನ್ನು ಹ್ಯಾಕ್ ಮಾಡಿ ಎಟಿಎಂ, ಪೆಟಿಎಂ, ಗೂಗಲ್ ಪೇ, ಫೋನ್ ಪೇ ಇನ್ನಿತರೆ ಆನ್ಲೈನ್ ಸೇವೆಗಳನ್ನು ತಮ್ಮ ಮುಷ್ಠಿ ಹಿಡಿತಕ್ಕೆ ಪಡೆದು ಸೈಬರ್ ಲೋಕವನ್ನು ಆಳುತ್ತಿದ್ದಾರೆ. ವಿಪರ್ಯಾಸವೆಂದರೆ ಯುವ ಜನಾಂಗವೇ ಹೆಚ್ಚು ಮೋಸಕ್ಕೆ ಒಳಗಾಗುತ್ತಿದೆ.
ಮತ್ತೊಂದೆಡೆ ಸೈಬರ್ ಹ್ಯಾಕರ್ಸ್ ಯಾರು? ಎಲ್ಲಿದ್ದಾರೆ? ಅವರ ತಂಡ ಹೇಗೆ ಕಾರ್ಯ ನಡೆಸುತ್ತದೆ? ಹೀಗೆ ಯಾವುದೇ ಅಂಶಗಳ ಕುರಿತು ಪೊಲೀಸರಿಗೇ ಮಾಹಿತಿ ಇಲ್ಲ. ಸೈಬರ್ ಪ್ರಕರಣಗಳನ್ನು ಮಟ್ಟ ಹಾಕುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಹ್ಯಾಕರ್ಸ್ಗಳಲ್ಲಿರುವ ಆಧುನಿಕ ತಂತ್ರಜ್ಞಾನ ಪೊಲೀಸರೊಂದಿಗೂ ಇಲ್ಲ. ಹೀಗಾಗಿ ಆರೋಪಿಗಳ ಚಲನವಲನ ಪತ್ತೆ ಹಚ್ಚುವುದು ಕಷ್ಟಸಾಧ್ಯವಾಗಿದ್ದು, ಪ್ರಕರಣಗಳ ಸಂಖ್ಯೆ ಏರುತ್ತಲೇ ಇವೆ.
ಅನ್ಲಾಕ್ ನಂತರ ಸಿಲಿಕಾನ್ ಸಿಟಿಯಲ್ಲಿ ಬೇರೆ ಅಪರಾಧ ಪ್ರಕರಣಗಳಿಗಿಂತ ಸೈಬರ್ ಪ್ರಕರಣಗಳೇ ಹೆಚ್ಚು ದಾಖಲಾಗಿವೆ. 2020ರಲ್ಲಿ 8167 ಪ್ರಕರಣ ದಾಖಲು (201 ಪತ್ತೆ), 2019ರಲ್ಲಿ 12,014 (193), 2018ರಲ್ಲಿ 5,788 (386), 2017ರಲ್ಲಿ 3,148 (1,036). ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಂಗಳೂರಲ್ಲೇ ಹೆಚ್ಚು ಪ್ರಕರಣಗಳು ದಾಖಲಾಗಿವೆ. ತದನಂತರ ಸ್ಥಾನದಲ್ಲಿ ಮೈಸೂರು ನಗರ, ಮಂಗಳೂರು ನಗರ, ಚಿಕ್ಕಮಗಳೂರು, ಕೊಲಾರ, ಧಾರವಾಡ, ದಾವಣಗೆರೆ, ಶಿವಮೊಗ್ಗ ಸೇರಿವೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮೊದಲ ಬಾರಿಗೆ ಸೈಬರ್ ಕ್ರೈಮ್ ಠಾಣೆ ತೆರೆಯಲಾಯಿತು. ದೂರುಗಳ ಸಂಖ್ಯೆ ಹೆಚ್ಚಾದ ಕಾರಣ ಠಾಣೆಗಳ ಸಂಖ್ಯೆ 8 (ಸೆನ್ ಠಾಣೆ)ಕ್ಕೇರಿತು.
ಸೈಬರ್ ಅಪರಾಧಕ್ಕೆ ಕಡಿವಾಣ ಬೀಳದಿರಲು ಕಾರಣಗಳೇನು?
- ಪೊಲೀಸ್ ಇಲಾಖೆಯಲ್ಲಿ ಪರಿಣಿತರ ಕೊರತೆ
- ಆಧುನಿಕ ತಂತ್ರಜ್ಞಾನದ ಮಾಹಿತಿ ಕೊರತೆ
- ಸೈಬರ್ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ
- ಖಾಸಗಿತನದ ನೆಪದಲ್ಲಿ ವಿದೇಶದ ಕಂಪನಿಗಳಿಂದ ಮಾಹಿತಿ ಹಂಚಿಕೆಗೆ ನಕಾರ
- ತನಿಖಾಧಿಕಾರಿಗಳಿಗೆ ವಾಹನ ವ್ಯವಸ್ಥೆ ಇಲ್ಲದಿರುವುದು.
- ಇಂಟರ್ನೆಟ್ ಬಳಕೆಗೆ ಪ್ರಾಕ್ಸಿ, ಐಪಿ ಅಡ್ರೆಸ್ ಬಳಕೆ
- ದೇಶದ ಪ್ರಮುಖ ಜಾಲತಾಣ, ಬ್ರೌಸರ್ ಕಂಪನಿಗಳ ಪ್ರಾದೇಶಿಕ ಕಚೇರಿ ಇಲ್ಲದಿರುವುದು
- ಕೆಲವರಿಗೆ ಆನ್ಲೈನ್ ಮಾಹಿತಿ ಕೊರತೆ
ಗೃಹ ಸಚಿವ ಬಸವರಾಜ್ ಬೊಮ್ಮಯಿ ಸೈಬರ್ ಪರಿಣಿತರ ತಂಡ ರಚಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಮಾತನಾಡಿ, ನಗರದಲ್ಲಿ ತೆರೆದಿರುವ ಸೆನ್ (ಸೈಬರ್) ಪೊಲೀಸ್ ಠಾಣೆಗಳು ಮೂರು ತಿಂಗಳಿಂದ ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಸೇರಿ 13 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ 8 ತಿಂಗಳ ಕಾಲ ತರಬೇತಿ ನೀಡಲಾಗಿದೆ. ಆರೋಪಿಗಳ ಪತ್ತೆಗೆ ಹೆಚ್ಚೆಚ್ಚು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.