ಬೆಂಗಳೂರು: ರಾಜ್ಯಮಟ್ಟದ ಅಂಚೆ ಚೀಟಿಗಳ ಮಹಾ ಪ್ರದರ್ಶನದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ಇಂದಿನಿಂದ 8ರವರೆಗೆ 13ನೇ ಕರ್ನಾಪೆಕ್ಸ್ -2024 ಅಂಚೆ ಚೀಟಿಗಳ ಹಬ್ಬ ಹಮ್ಮಿಕೊಳ್ಳಲಾಗಿದ್ದು, ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, "ರಾಜ್ಯದ ಸಂಸ್ಕತಿ, ಕಲೆ, ಪರಂಪರೆ, ತಂತ್ರಜ್ಞಾನ ಹಾಗೂ ಸಾಧನೆಗಳನ್ನು ಒಂದೇ ಸೂರಿನಡಿಯಲ್ಲಿ ಪರಿಚಯಿಸಲಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಂಚೆ ಚೀಟಿ ಪ್ರದರ್ಶನಕ್ಕೆ ಭೇಟಿ ನೀಡುವ ಮೂಲಕ ಅಪರೂಪದ ಮಾಹಿತಿ ಪಡೆದುಕೊಳ್ಳಬೇಕು" ಎಂದು ತಿಳಿಸಿದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಮಾತನಾಡಿ, "ಪುಣ್ಯ ಮಾಡಿದವರು ಕರ್ನಾಟಕದಲ್ಲಿ ಹುಟ್ಟಿರುತ್ತಾರೆ. ಹೆಚ್ಚು ಪುಣ್ಯ ಮಾಡಿದವರು ಕನ್ನಡವನ್ನು ಮಾತೃಭಾಷೆಯಾಗಿ ಪಡೆದಿರುತ್ತಾರೆ. ಕನ್ನಡಿಗರಲ್ಲಿ ಧರ್ಮಪ್ರೇಮ, ಭಾತೃತ್ವ, ಸೌಹಾರ್ದತೆ, ಒಳ್ಳೆಯದು, ಕೆಟ್ಟದ್ದು ಎಲ್ಲಾ ಇದೆ. ಕನ್ನಡಿಗರು ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ ಎಂದು ಕಪ್ಪೆ ಅರೆಭಟ್ಟನ ಶಾಸನ ಹೇಳುತ್ತದೆ" ಎಂದು ಹೇಳಿದರು.
"ಹರ್ಷವರ್ಧನನನ್ನು ನರ್ಮದೆಯ ತಟದಲ್ಲಿ ಸೋಲಿಸಿದ ಇಮ್ಮಡಿ ಪುಲಿಕೇಶಿಯು ದಕ್ಷಿಣ ಪಥೇಶ್ವರ ಎಂಬ ಬಿರುದು ಪಡೆದಿದ್ದ. 'ಕರ್ಣಾಟ ಬಲ ಅಜೇಯಂ' ಎಂದು ವರ್ಣಿಸಲ್ಪಟ್ಟ ಆತನ ಸೈನ್ಯವು ಕರ್ನಾಟಕದ ಇತಿಹಾಸದಲ್ಲಿ ಐತಿಹಾಸಿಕ ದಾಖಲೆಯಾಗಿದೆ. ಕನ್ನಡಿಗರು ಕೇವಲ ಶೌರ್ಯದಲ್ಲಿ ಮಾತ್ರವಲ್ಲದೆ ಕಾವ್ಯ ಪರಿಣಿತ ಮತಿಗಳ್ ಎಂದು ಕಾವ್ಯ ಮೀಮಾಂಸೆ, ಇತ್ಯಾದಿಗಳಲ್ಲಿ ಪಾಂಡಿತ್ಯವನ್ನು ಹೊಂದಿದವರೂ ಆಗಿದ್ದಾರೆ. ಹಾಗಾಗಿ ಈ ನೆಲದ ಇತಿಹಾಸ, ಸಂಸ್ಕ್ರತಿಯ ಬಗ್ಗೆ ಕನ್ನಡಿಗರಿಗೆ ಹೆಮ್ಮೆ ಇರಬೇಕು" ಎಂದು ಹೇಳಿದರು.
ಪುನೀತ್ ಅಂಚೆ ಚೀಟಿ ಬಿಡುಗಡೆ: ಕಾರ್ಯಕ್ರಮದಲ್ಲಿ ಕರ್ನಾಟಕ ಅಂಚೆ ಇಲಾಖೆಯ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಹೆಸರಿನಲ್ಲಿ ಅಂಚೆ ಚೀಟಿ ಹಾಗೂ ಅಂಚೆ ಇಲಾಖೆಯ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಯಿತು. ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಆಗಮಿಸಿದ್ದರು. ಶಾಸಕರಾದ ರಿಜ್ವಾನ್ ಅರ್ಷದ್, ಎನ್.ಎ.ಹ್ಯಾರೀಸ್ ಹಾಗೂ ಎಲ್.ಕೆ.ದಾಸ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಪ್ರದರ್ಶನ ಮೂರು ದಿನಗಳ ಕಾಲ ನಡೆಯಲಿದೆ.
ಇದನ್ನೂ ಓದಿ: ಬೆಂಗಳೂರು: ಜ. 5ರಿಂದ ಕರ್ನಾಪೆಕ್ಸ್ 2024- ಅಂಚೆ ಚೀಟಿಗಳ ಹಬ್ಬ