ಬೆಂಗಳೂರು: ಸರ್ಕಾರಿ ಶಾಲೆಗಳನ್ನು ಸುಸ್ಥಿತಿಗೆ ತರುವುದೇ ನಮ್ಮ ಪಕ್ಷದ ಮೊದಲ ಆದ್ಯತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಮೂಲಭೂತ ಹಕ್ಕಾದ ಶಿಕ್ಷಣವನ್ನು ಉತ್ತಮ ರೀತಿಯಲ್ಲಿ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಅವ್ಯವಸ್ಥೆ, ಆ ಮೂಲಕ ಮಕ್ಕಳ ಮೇಲಾಗುವ ವ್ಯತಿರಿಕ್ತ ಪರಿಣಾಮದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೋ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದಾರೆ.
ಡಿ ಕೆ ಶಿವಕುಮಾರ್ ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ ಕರ್ನಾಟಕದ ಪ್ರಸ್ತುತ ಶಿಕ್ಷಣ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಲಾಗಿದೆ. ಶಿಕ್ಷಣ ಇಲಾಖೆ ಏಕೀಕೃತ ಜಿಲ್ಲಾ ಶಿಕ್ಷಣ ವ್ಯವಸ್ಥೆ (ಯುಡಿಎಸ್ಇ+) ವರದಿಯನ್ನು ಬಿಡುಗಡೆ ಮಾಡಿದ್ದು, ವರದಿಯಲ್ಲಿ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಹೆಚ್ಚಿದ್ದರೂ ಶಿಕ್ಷಕರ ಸಂಖ್ಯೆ ಕಡಿಮೆಯಿರುವುದು ಉಲ್ಲೇಖವಾಗಿದೆ. ಇದು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ರಾಜ್ಯದಲ್ಲಿ ಒಟ್ಟು ಶಾಲೆಗಳ ಸಂಖ್ಯೆ 76,450. ಅದರಲ್ಲಿ 49,679 ಸರ್ಕಾರಿ ಶಾಲೆಗಳು, 7,110 ಸರ್ಕಾರಿ ಅನುದಾನಿತ ಶಾಲೆಗಳು, 19,650 ಖಾಸಗಿ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳಿವೆ. ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ 2021ರಲ್ಲಿ 1.18 ಕೋಟಿ ಇದ್ದದ್ದು 2022ರ ವೇಳೆಗೆ 1.20 ಕೋಟಿಯಾಗಿದೆ. 2021-22ನೇ ಸಾಲಿನಲ್ಲಿ 8 ಲಕ್ಷಕ್ಕೂ ಹೆಚ್ಚು ಹೊಸ ವಿದ್ಯಾರ್ಥಿನಿಯರು ದಾಖಲಾಗುವುದರ ಜೊತೆಗೆ ಇದೇ ಸಾಲಿನಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಸಿಡಬ್ಲ್ಯೂಎಸ್ಎನ್ ಅಡಿಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದಿದ್ದಾರೆ.
2020-21 ಯುಡಿಐಎಸ್ಇ+ ವರದಿಗೆ ಹೋಲಿಸಿದರೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ 2.08 ಲಕ್ಷದಿಂದ 1.99 ಲಕ್ಷಕ್ಕೆ ಇಳಿಕೆಯಾಗಿದ್ದು, ಪ್ರಾಥಮಿಕ ಹಂತದಲ್ಲಿ ಸುಮಾರು 23 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರು ಇರುವಂತಾಗಿರುವುದು ಕಳವಳಕಾರಿಯಾಗಿದೆ. ಕರ್ನಾಟಕದಲ್ಲಿ 47,608 ಸರ್ಕಾರಿ ಶಾಲೆಗಳಿವೆ. 45.42 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದು, ಒಟ್ಟು 2.5 ಲಕ್ಷ ತರಗತಿಗಳಿವೆ. ಈ ಪೈಕಿ 40 ಸಾವಿರ ತರಗತಿಗಳನ್ನು ತುರ್ತು ರಿಪೇರಿ ಮಾಡಿಸಬೇಕಿದ್ದು, ಮಕ್ಕಳ ಹಿತಾಸಕ್ತಿಗೆ ಸರ್ಕಾರ ಮುಂದಾಗಬೇಕಿದೆ. ರಾಜ್ಯದಲ್ಲಿ ಆರ್ಟಿಇ ಮೂಲೆಗುಂಪಾಗಿರುವುದು ದುರದೃಷ್ಟಕರ. ಅಂಕಿ ಅಂಶಗಳ ಪ್ರಕಾರ ಆರ್ಟಿಇ ಮಾನದಂಡಗಳನ್ನು ಅನುಸರಿಸುವಲ್ಲಿ ರಾಜ್ಯವು ಶೇಕಡಾ 23.6ರಷ್ಟು ಕಡಿಮೆ ಅನುಸರಣೆ ದರ ಹೊಂದಿದೆ. ಸರ್ಕಾರಿ ಶಾಲೆಗಳಲ್ಲಿ ನೀರು, ವಿದ್ಯುತ್ನಂತಹ ಸೌಲಭ್ಯಗಳ ಕೊರತೆ ಹೆಚ್ಚಳವಾಗಿರುವುದು ಜಡ್ಡುಗಟ್ಟಿದ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಕಲ್ಯಾಣ-ಕರ್ನಾಟಕದ 8,028 ಪ್ರಾಥಮಿಕ ಶಾಲೆಗಳ ಪೈಕಿ 1,234 ಶಾಲೆಗಳು ಮತ್ತು 4,663 ತರಗತಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಒಟ್ಟು 1,193 ಪ್ರೌಢಶಾಲೆಗಳ ಪೈಕಿ 237 ಶಾಲೆಗಳು ಮತ್ತು 762 ತರಗತಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಹಾಗೆ ಕಲಬುರಗಿಯಲ್ಲಿ 187, ಬಳ್ಳಾರಿಯಲ್ಲಿ 168, ಕೊಪ್ಪಳದಲ್ಲಿ 118, ರಾಯಚೂರಿನಲ್ಲಿ 100, ಯಾದಗಿರಿಯಲ್ಲಿ 97 ತರಗತಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಇನ್ನು, ಶಿವಮೊಗ್ಗ ಜಿಲ್ಲೆಯಲ್ಲಿ 2,001 ಸರ್ಕಾರಿ ಶಾಲೆಗಳಿದ್ದು, 11,842 ತರಗತಿ ಕೊಠಡಿಗಳಿವೆ. ಅವುಗಳಲ್ಲಿ ಸುಮಾರು 2,000 ತರಗತಿ ಕೊಠಡಿಗಳಿಗೆ ನಿರ್ವಹಣಾ ಕಾರ್ಯದ ಅಗತ್ಯವಿದೆ. ದಾವಣಗೆರೆ ಜಿಲ್ಲೆಯಲ್ಲಿ ಬಹಳಷ್ಟು ಕೊಠಡಿಗಳು ತರಗತಿ ನಡೆಸಲು ಯೋಗ್ಯವಾಗಿಲ್ಲ. ಜಿಲ್ಲೆಯಲ್ಲಿ 72 ತರಗತಿ ಕೊಠಡಿಗಳನ್ನು ಕೆಡವಲು ಗುರುತಿಸಲಾಗಿದೆ. ಚಿತ್ರದುರ್ಗದ ಸರ್ಕಾರಿ ಬಾಲಕರ ಪ್ರೌಢಶಾಲೆ ಮತ್ತು ಜೂನಿಯರ್ ಕಾಲೇಜು ಕಟ್ಟಡ ಯಾವಾಗ ಬೀಳುತ್ತದೆಯೋ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಅಂಶಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ ವಿವರವಾಗಿ ತಿಳಿಸಲಾಗಿದ್ದು, ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗಿದೆ. ಅಲ್ಲದೇ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ಶಾಲೆಗಳ ಪರಿಸ್ಥಿತಿಯನ್ನು ಸುಧಾರಿಸುವುದು ನಮ್ಮ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ. ಈ ಮೂಲಕ ಚುನಾವಣೆಗೆ ಕೆಲ ತಿಂಗಳು ಇರುವ ಸಂದರ್ಭದಲ್ಲಿ ರಾಜ್ಯದ ಜನತೆಗೆ ಭರವಸೆಗಳನ್ನು ನೀಡುವ ಕಾರ್ಯ ಆರಂಭಿಸಿದ್ದಾರೆ.
ಇದನ್ನೂ ಓದಿ: ಇಡಿಯಿಂದ ಮತ್ತೆ ಸಮನ್ಸ್ ಜಾರಿ.. ವಿಚಾರಣೆಗಾಗಿ ಉಜ್ಜಯಿನಿಯಿಂದ ದೆಹಲಿಗೆ ದೌಡಾಯಿಸಿದ ಡಿಕೆಶಿ