ಬೆಂಗಳೂರು: ಕಳಸಾ ಬಂಡೂರಿ ಯೋಜನೆ ಜಾರಿ ಮಾಡದೇ ಇದ್ದಲ್ಲಿ ಬಂಡಾಯದ ಕಹಳೆ ಮೊಳಗಿಸಿ ಮತ್ತೆ ಬಂದ್ ನಂತಹ ಹಾದಿ ತುಳಿಯಬೇಕಾಗುತ್ತದೆ ಎಂದು ಕಳಸಾ ಬಂಡೂರಿ, ಮಹಾದಾಯಿ ರೈತ ಹೋರಾಟ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಮಹದಾಯಿ - ಕಳಸಾ ಬಂಡೂರಿ ರೈತ ಒಕ್ಕೂಟದ ನಿಯೋಗ ಇಂದು ಭೇಟಿ ನೀಡಿತು. ಕಳಸಾ ಬಂಡೂರಿ, ಮಹದಾಯಿ ಯೋಜನೆ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿತು. ಈ ವೇಳೆ, ಪ್ರಕರಣ ನ್ಯಾಯಾಲಯದಲ್ಲಿದ್ದು, ತೀರ್ಪು ಬಂದ ನಂತರ ಕ್ರಮ ಕೈಗೊಳ್ಳುವ ಕುರಿತು ಸಿಎಂ ಆಶ್ವಾಸನೆ ನೀಡಿದರು ಎನ್ನಲಾಗಿದೆ.
ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ ಮುಖಂಡ ಸುಭಾಶ್ಚಂದ್ರಗೌಡ ಪಾಟೀಲ್, ಸಿಎಂ ಮೇಲೆ ನಮಗೆ ಭರವಸೆಯಿದೆ. ನಾವು ಕಾದು ನೋಡುತ್ತೇವೆ. ಒಂದು ವೇಳೆ ನಮ್ಮ ಬೇಡಿಕೆಗೆ ತಕ್ಕ ಉತ್ತರ ಸಿಗದೇ ಇದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಬಂಡಾಯದ ನೆಲದಲ್ಲಿ ಮತ್ತೊಮ್ಮೆ ಬಂಡಾಯ ಮಾಡುತ್ತೇವೆ. ಮಹದಾಯಿ ಆಗೋವರೆಗೂ ನಾವು ಹೋರಾಟ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇತರ ಬೇಡಿಕೆಗಳು
- ಸಣ್ಣ ರೈತರು ದೊಡ್ಡ ರೈತರು ನವಲಗುಂದ ತಾಲೂಕಿನಲ್ಲಿ ಇದ್ದರೂ ಕೂಡಾ ರೈತ ಸಂಪರ್ಕ ಕೇಂದ್ರ ಇಲ್ಲ. ತಕ್ಷಣ ರೈತ ಸಂಪರ್ಕ ಕೇಂದ್ರವನ್ನು ಮಾಡಿಕೊಡಬೇಕು.
- 2020-21ರ ಸಾಲಿನ ಬಾಕಿ ಉಳಿದಿರುವ ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆ - ಬೆಳೆ ವಿಮೆ ಪರಿಹಾರ ಹಣವನ್ನು ತಕ್ಷಣ ಬಿಡುಗಡೆಗೋಳಿಸಬೇಕು.
- 2021-22 ರ ಮುಂಗಾರು ಬೆಳೆಗಳು ಅತಿವೃಷ್ಟಿಯಿಂದ ಸಂಪೂರ್ಣ ಹಾಳಾಗಿದ್ದು, ಆದರ ಪರಿಹಾರ ಹಣವನ್ನು ತಕ್ಷಣವೇ ಬಿಡುಗಡೆಗೋಳಿಸಬೇಕು.
- ಮೆಣಸಿನಕಾಯಿ ತುಂಬಿದ ಬೆಳೆ ವಿಮೆ ಅಂದಾಜು 3 ಕೋಟಿ ರೂ. ರೈತರಿಗೆ ಬರಬೇಕಿದ್ದು. ತಕ್ಷಣವೇ ಬಾಕಿ ಹಣ ಬಿಡುಗಡೆಗೋಳಿಸಬೇಕು.
- ಉ.ಕ ಹವಾಮಾನ ಬೆಳೆ ಬಿತ್ತಲಿಕ್ಕೆ ಕೂರಿಗೆ ಉಳಿದ ಸಾಮಗ್ರಿಗಳ ಉಪಕರಣಗಳು ತಕ್ಷಣವೇ ಅವಶ್ಯಕತೆ ಇರುವುದರಿಂದ ಈ ಭಾಗಕ್ಕೆ ಸಾಕಷ್ಟು ಅನುದಾನ (ಹಣ) ಬಿಡುಗಡೆಗೊಳಿಸಿಬೇಕು.
- ಹೆಸರು ಬೆಳೆಯ ಬೆಂಬಲ ಬೆಲೆಯನ್ನು 8000 ರೂ.ಗಳಿಗೆ ಹೆಚ್ಚಿಸಬೇಕು ಹಾಗೂ ಮೈಶ್ಚರ್ 12 ಇದ್ದದ್ದನ್ನು ಕನಿಷ್ಠ 14ಕ್ಕೆ ಖರೀದಿ ಮಾಡಬೇಕು ಹಾಗೂ 6 ಕ್ವಿಂಟಲ್ ಇದ್ದದನ್ನು 10 ಕ್ವಿಂಟಲ್ಗೆ ಹೆಚ್ಚಿಸಬೇಕು.
- ವಿಂಗಡಣೆ ಮಾಡಿ ದೊಡ್ಡ ರೈತರಿಗೆ ಸಬ್ಸಿಡಿ ಕೊಟ್ಟಿರುವುದಿಲ್ಲ. ರೈತನ ಬೆಳೆ ರಾಷ್ಟ್ರೀಯ ಸಂಪತ್ತು. ಆದ್ದರಿಂದ ಸಣ್ಣ ರೈತರಂತೆ ದೊಡ್ಡ ರೈತರಿಗೂ ಸೌಲಭ್ಯ ಸಿಗುವಂತೆ ಮಾಡಬೇಕು.
- ಸಹಕಾರಿ ಬ್ಯಾಂಕುಗಳಲ್ಲಿ ಸ್ಕೇಲ್ ಫೈನಾನ್ಸ್ ಇದ್ದರೂ ಎಕರಗೆ 10-20 ಸಾವಿರ ಕೊಡುತ್ತಾರೆ ಇದನ್ನು ಸ್ಕೇಲ್ ಫೈನಾನ್ಸ್ ನಂತೆ ಸಾಲ ಮಂಜೂರಾತಿ ಮಾಡಬೇಕು.
- ಬ್ಯಾಂಕ್ಗಳಲ್ಲಿ ರೈತರು ಮಾಡಿದ ಸಾಲ ಏಕತಿರುವಳಿ ಮಾಡಿದಾಗ ಮರಳಿ (CIBL) ತೆಗೆದು ಹಾಕಿ ಮರಳಿ ರೈತರಿಗೆ ಸಾಲ ಕೊಡಬೇಕು.
- ಮಾಜಿ ಮುಖ್ಯ ಮಂತ್ರಿಗಳಾದ ಕುಮಾರಸ್ವಾಮಿಗಳ 2 ಲಕ್ಷದವರೆಗಿನ ಸಾಲಮನ್ನಾ ಯೋಜನೆ ಇನ್ನು ಅನೇಕ ರೈತರಿಗೆ ತಲುಪಿಲ್ಲ. ತಕ್ಷಣವೇ ಬಿಡುಗಡಗೊಳಿಸಬೇಕು ಹಾಗೂ ಸಹಕಾರಿ ಸಂಘದಲ್ಲಿ ಸಾಲ ಮನ್ನಾಯೋಜನೆ 2 ಲಕ್ಷದ ವರೆಗೆ ಮುಟ್ಟಿರುವುದಿಲ್ಲ ಅಂತ ರೈತನಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೂ ಅಳವಡಿಸಬೇಕು.
- ಕೃಷಿ ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದೆ ಹಾಗೂ ತೋಟಗಾರಿಕೆ ಇಲಾಖೆಯಲ್ಲಿಯೂ ಸಿಬ್ಬಂದಿ ಭರ್ತಿಮಾಡಬೇಕು, ತೋಟಗಾರಿಕೆ ಇಲಾಖೆಯಲ್ಲಿ ಕೆರೆಗಳಿಗೆ ಹಾಗೂ ಇತರ ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೋಳಿಸಬೇಕು. ಅಣ್ಣೀಗೇರಿ ಹಾಗೂ ಹಳ್ಳಿಕೇರಿಯಲ್ಲಿ ರೈಲ್ವೆ ಬ್ರಿಡ್ಜ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.