ಬೆಂಗಳೂರು: ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ನಾಲ್ಕು ವಿಧಾನ ಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿದ್ದು, ಇಂದಿನಿಂದಲೇ ಬೆಂಗಳೂರು ನಗರಕ್ಕೆ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ ತಿಳಿಸಿದರು.
ಕೆಆರ್ ಪುರಂ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಶಿವಾಜಿನಗರ ಒಟ್ಟು ನಾಲ್ಕು ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣಾ ಪ್ರಕ್ರಿಯೆ ನಡೆಸಲಾಗುವುದು. ಸೋಮವಾರ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದು, ಅಕ್ಟೋಬರ್ 3 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕಡೆಯ ದಿನವಾಗಿದೆ. ಅ.21 ರಂದು ಚುನಾವಣೆ ನಡೆಯಲಿದ್ದು, ಅ. 24 ರಂದು ಮತ ಎಣಿಕೆ ನಡೆಯಲಿದೆ. ಈಗಾಗಲೇ ಚುನಾವಣಾ ವೀಕ್ಷಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಒಟ್ಟು ಮತಗಟ್ಟೆ: 1361, ಒಟ್ಟು ಮತದಾರರು- 14,14,144, ಕೆ.ಆರ್. ಪುರಂ - 4,63,612, ಯಶವಂತಪುರ- 4,72,211, ಮಹಾಲಕ್ಷ್ಮಿ ಲೇಔಟ್ -2,86,285,
ಶಿವಾಜಿನಗರ- 1,92,036, ಚುನಾವಣಾ ಸಿಬ್ಬಂದಿಗಳು- 6532, ಚುನಾವಣಾ ಸಹಾಯವಾಣಿ- 1950 ಯನ್ನು ಸಂಪರ್ಕಿಸಬಹುದು.
ಆಯಾ ವಿಧಾನಸಭಾ ಕ್ಷೇತ್ರದಲ್ಲೇ ಮತ ಎಣಿಕೆ ಕೇಂದ್ರಗಳಿವೆ. ಸದ್ಯ ಇರುವ ಮತಗಟ್ಟೆಗಳು ಶಿಥಿಲವಾಗಿದ್ದರೆ ಎರಡು ದಿನದಲ್ಲಿ ಬದಲಾವಣೆಗೆ ಚುನಾವಣಾ ಆಯೋಗ ಅವಕಾಶ ನೀಡಿದೆ ಎಂದು ಆಯುಕ್ತರು ತಿಳಿಸಿದರು. ವಿಶೇಷ ಚೇತನರಿಗೆ ವಿಶೇಷ ಸೌಲಭ್ಯ ನೀಡಲಾಗುವುದು ಎಂದರು.
ಆಡಳಿತ ಪಕ್ಷದ ನಾಯಕ ವಾಜಿದ್ ಮಾತನಾಡಿ, ಮೇಯರ್, ಉಪಮೇಯರ್ ಚುನಾವಣೆ ಸೆಪ್ಟೆಂಬರ್ 27 ರಂದು ನಡೆಸುವುದು ಸೂಕ್ತ ಅಲ್ಲ. ಈ ಬಗ್ಗೆ ಆಯುಕ್ತರಿಗೆ ಪತ್ರ ಬರೆದಿದ್ದು, ಆಯುಕ್ರರು ಮುಖ್ಯ ಚುನಾವಣಾ ಅಧಿಕಾರಿಯವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದರು.
ಉಪಚುನಾವಣೆ ನಡೆಯಲಿರುವ ನಾಲ್ಕು ಕ್ಷೇತ್ರಗಳೂ ಬೆಂಗಳೂರು ವ್ಯಾಪ್ತಿಯಲ್ಲಿ ಬರುತ್ತದೆ. ಆ ಕ್ಷೇತ್ರಗಳಲ್ಲೂ ಸದಸ್ಯರು ಇರುವುದರಿಂದ ಸ್ಥಾಯಿ ಸಮಿತಿಯ ಅಧಿಕಾರ ಕೊಟ್ಟರೆ, ಸದಸ್ಯರು ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅಲ್ಲದೆ 27 ನೇ ತಾರೀಕಿನಂದು ಚುನಾವಣೆ ಆದರೂ ನೀತಿ ಸಂಹಿತೆ ಜಾರಿ ಇರುವುದರಿಂದ ಮೇಯರ್ ಕೆಲಸ ಮಾಡಲು ಸಾಧ್ಯವಾಗಿವುದಿಲ್ಲ. ಹೀಗಾಗಿ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಬಳಿಕವೇ ಮೇಯರ್ ಚುನಾವಣೆ ನಡೆಸಲು ಪತ್ರ ಬರೆಯಲಾಗಿದೆ ಎಂದರು.