ಬೆಂಗಳೂರು: ರಾಜ್ಯ ಪೊಲೀಸರಿಗೆ ನಾಡಹಬ್ಬದ ದಸರಾ ವೇಳೆಗೆ ವೇತನ ಹೆಚ್ಚಳದ ಉಡುಗೊರೆ ಸಿಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಔರಾದ್ಕರ್ ಸಮಿತಿ ವರದಿಯನ್ನು ಮುಂದಿನ ತಿಂಗಳಿಂದ ಅನುಷ್ಠಾನ ಮಾಡಲಾಗುವುದು. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಸಚಿವ ಸಂಪುಟ ಸಭೆಯಲ್ಲೂ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಒಟ್ಟಿನಲ್ಲಿ ನಾಡ ಹಬ್ಬ ವೇಳೆ ಪೊಲೀಸರಿಗೆ ಒಳ್ಳೆ ಸುದ್ದಿ ಸಿಗಲಿದೆ ಎಂದು ಹೇಳಿದರು.
ಪೇದೆಯಿಂದ ಹಿಡಿದು ಡಿವೈಎಸ್ಪಿ ವರೆಗೆ ಔರಾದ್ಕರ್ ವರದಿಯಂತೆ ವೇತನ ಪರಿಷ್ಕರಣೆ ಆಗಲಿದೆ. ಅದರ ಜತೆಗೆ ಕಾರಾಗೃಹ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ವೇತನ ಪರಿಷ್ಕರಿಸುವ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾಪ ಸಲ್ಲಿಸಲು ಸೂಚನೆ ನೀಡಲಾಗಿದೆ. ಅವರಿಗೂ ಔರಾದ್ಕರ್ ವರದಿಯಂತೆ ವೇತನ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಗೋಹತ್ಯೆ ನಿಷೇಧ ಚರ್ಚೆ:
ಗೋಹತ್ಯೆ ನಿಷೇಧ ಕಾನೂನು ವಿಚಾರವಾಗಿ ಮಾತನಾಡಿದ ಅವರು, ಗೋಹತ್ಯೆ ನಿಷೇಧ 60 ರ ದಶಕದಲ್ಲೇ ಬಂತು. ಇವತ್ತಿನ ಸಂದರ್ಭದಲ್ಲಿ ಇದರ ಸ್ಥಿತಿ ಗತಿ, ಪರಿಣಾಮಗಳ ಅಧ್ಯಯನ ಮಾಡಬೇಕಿದೆ. ಎಲ್ಲರ ಜೊತೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈ ಗೊಳ್ಳುತ್ತೇವೆ. ಎಲ್ಲಾ ಇಲಾಖೆಗಳ ಜೊತೆಗೂ ಚರ್ಚಿಸಬೇಕಾಗಿದೆ. ಬೇರೆ ರಾಜ್ಯಗಳಲ್ಲಿ ಯಾವ ನೀತಿ ಇದೆ ಅಂತ ಪರಿಗಣಿಸಿ ಚರ್ಚೆ ಮಾಡುತ್ತೇವೆ. ಗೋ ರಕ್ಷಣೆ ಮಾಡೇ ಮಾಡುತ್ತೇವೆ ಅದರಲ್ಲಿ ಅನುಮಾನ ಇಲ್ಲ. ಆದರೆ, ಕಾಯ್ದೆ ಸಂಬಂಧ ಮಾಹಿತಿ ಇಲ್ಲ ಎಂದರು.
ಯೋಗೀಶ್ ಗೌಡ ಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಪ್ರಕರಣ ಸಿಬಿಐಗೆ ಕೊಡಲು ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಉಳಿದ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ಸ್ಪಷ್ಟಪಡಿಸಿದರು.
ದುಬಾರಿ ಟ್ರಾಫಿಕ್ ದಂಡ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರಕ್ಕೆ ಜನರ ಭಾವನೆ ಬಗ್ಗೆ ಮನವರಿಕೆ ಮಾಡಲಾಗುವುದು. ದುಬಾರಿ ದಂಡದ ವಿರುದ್ಧ ಜನರ ಆಕ್ಷೇಪಗಳ ಬಗ್ಗೆ ಸಿಎಂ ಮೂಲಕ ಕೇಂದ್ರದ ಸಚಿವರಿಗೆ ತಿಳಿಸಿ ಆ ಮುಖಾಂತರ ಮುಂದಿನ ತೀರ್ಮಾನವನ್ನು ಮಾಡುತ್ತೇವೆ ಎಂದರು.
ನಿನ್ನೆ ಸಿಎಂ ಬಿಬಿಎಂಪಿಗೆ ರಸ್ತೆ ಗುಂಡಿ ಮುಚ್ಚಲು ಸೂಚನೆ ಕೊಟ್ಟಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಬಿಬಿಎಂಪಿ ಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಳುತ್ತಿದೆ. ಇದು ಕೇಂದ್ರದಿಂದ ಮಾಡಿರುವ ನಿಯಮ. ಯುಪಿಎ ಇದ್ದಾಗ ಮೊದಲು ಪ್ರಸ್ತಾಪ ಬಂತು. ನಂತರ ಜಂಟಿ ಸಮಿತಿಗೆ ಪ್ರಸ್ತಾಪ ಹೋಗಿ ಎಲ್ಲ ಪಕ್ಷದವರೂ ಸೇರಿ ಸಂಸತ್ನಲ್ಲಿ ಈ ಕಾಯ್ದೆ ಪಾಸ್ ಮಾಡಿದ್ದಾರೆ ಎಂದೇಳಿದರು.