ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕಿಸುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲೇ ಸಾಕಷ್ಟು ಗೊಂದಲ ಇರುವುದು ಗೋಚರಿಸುತ್ತಿದೆ. ಹಿಂದೆ ಸರ್ಕಾರ ರಚನೆ ಸಂದರ್ಭ ಇವರ ಜತೆ ಕೈಜೋಡಿಸಿದ್ದ ಕಾಂಗ್ರೆಸ್ ನಾಯಕರು ಈಗಲೂ ಕುಮಾರಸ್ವಾಮಿ ಬಗ್ಗೆ ಮೃದುಧೋರಣೆ ಹೊಂದಿದ್ದಾರೆ. ಮತ್ತೊಂದು ಬಣ ಮಾತ್ರ ಕುಮಾರಸ್ವಾಮಿ ವಿರುದ್ಧ ಕಿಡಿಕಾರುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ಮೂಲ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ವಿಚಾರವಾಗಿ ತುಟಿ ಬಿಚ್ಚುತ್ತಿಲ್ಲ. ಆದರೆ ಜೆಡಿಎಸ್ ತ್ಯಜಿಸಿ ಬಂದಿರುವ ಸಿದ್ದರಾಮಯ್ಯ, ಜಮೀರ್ ಅಹ್ಮದ್ ಖಾನ್ ಮುಂತಾದ ನಾಯಕರು ಮಾತ್ರ ಕಿಡಿಕಾರುತ್ತಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಜತೆ ಕೈಜೋಡಿಸಿ ಒಂದೂವರೆ ವರ್ಷ ಸರ್ಕಾರ ನಡೆಸಿದ್ದ ಕಾಂಗ್ರೆಸ್ನಲ್ಲಿ ಡಿ.ಕೆ. ಶಿವಕುಮಾರ್ ಪ್ರಮುಖ ಇಂಧನ ಖಾತೆ ಹೊಂದಿದ್ದರು. ಇನ್ನು ಪರಮೇಶ್ವರ್ ಡಿಸಿಎಂ ಆಗಿದ್ದರು. ಇಂದಿಗೂ ಕುಮಾರಸ್ವಾಮಿ ಬಗ್ಗೆ ಇವರಿಗೆ ಒಂದಿಷ್ಟು ಗೌರವವಿದೆ. ಆದರೆ, ಕುಮಾರಸ್ವಾಮಿ ಸರ್ಕಾರದಲ್ಲಿ ಯಾವುದೇ ರೀತಿ ತಲೆ ತೂರಿಸುವ ಅವಕಾಶದಿಂದ ವಂಚಿತರಾಗಿದ್ದ ಸಿದ್ದರಾಮಯ್ಯ ಹಾಗೂ ಸಚಿವ ಸ್ಥಾನ ಪಡೆಯಲಾಗದೇ ಹೋಗಿದ್ದ ಜಮೀರ್ ಅಹಮದ್ಗೆ ಚುನಾವಣೆ ಇನ್ನೆರಡು ವರ್ಷ ಇರುವ ಸಂದರ್ಭದಲ್ಲಿ ಕುಮಾರಸ್ವಾಮಿ ವಿರುದ್ಧ ಟೀಕೆ ಮಾಡುವ ಉತ್ಸಾಹ ಇಮ್ಮಡಿಗೊಂಡಿದೆ.
ಜೆಡಿಎಸ್ನಿಂದ ವಲಸೆ ಬಂದ ಕಾಂಗ್ರೆಸ್ ನಾಯಕರು ನಿರಂತರವಾಗಿ ಕುಮಾರಸ್ವಾಮಿಯನ್ನು ಹೀಗಳೆಯುತ್ತಿದ್ದಾರೆ. ಆದರೆ ತಮ್ಮ ತೆಗಳಿಕೆ ಮುಂದೆ ಕುಮಾರಸ್ವಾಮಿಗೆ ಬೇಸರ ತರಿಸಬಹುದು, ಅಲ್ಲದೇ ಮುಂದೆ ಅಗತ್ಯ ಬಿದ್ದಾಗ ಮೈತ್ರಿ ಮಾಡಿಕೊಳ್ಳಲು ಹಿಂಜರಿಯಬಹುದು ಎಂಬ ಆತಂಕ ಮೂಲ ಕಾಂಗ್ರೆಸ್ ನಾಯಕರಲ್ಲಿದೆ. ಮುಂದಿನ ವಿಧಾನಸಭೆ ಚುನಾವಣೆ ಫಲಿತಾಂಶ ಅತಂತ್ರ ಬಂದರೆ ಯಾವ ರೀತಿಯ ಬೆಳವಣಿಗೆ ಬೇಕಾದರೂ ಆಗಬಹುದು. ಆದ್ದರಿಂದ ಇಂತಹ ಸಂದರ್ಭ ಹೆಚ್ಡಿಕೆ ಬಿಜೆಪಿಯತ್ತ ಒಲವು ತೋರದಿರಲಿ ಎಂಬ ಆಶಯ ಕೂಡ ಕಾಂಗ್ರೆಸ್ ನಾಯಕರದ್ದಾಗಿದೆ ಎಂಬ ಮಾತು ಕೇಳಿಬರುತ್ತಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಂ ಆಕಾಂಕ್ಷಿ ರೇಸ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ರಾಮನಗರ ಹಾಗೂ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವ ಚೆನ್ನಾಗಿದೆ. ರಾಮನಗರ ಜಿಲ್ಲೆಯಲ್ಲೂ ಕನಕಪುರ ಹೊರತುಪಡಿಸಿ ಉಳಿದ ಮೂರು ಕ್ಷೇತ್ರಗಳಾದ ರಾಮನಗರ, ಚನ್ನಪಟ್ಟಣ, ಮಾಗಡಿಯಲ್ಲಿ ಜೆಡಿಎಸ್ ತನ್ನ ಸದಸ್ಯರನ್ನು ಹೊಂದಿದೆ. ಖುದ್ದು ಕುಮಾರಸ್ವಾಮಿಯೇ ರಾಮನಗರ ಶಾಸಕರು. ಹೀಗಾಗಿ ಮುಂದಿನ ಸಾರಿ ಗೆಲ್ಲಲು ಡಿಕೆಶಿಗೆ ಹೆಚ್ಡಿಕೆ ನೆರವು ಅನಿವಾರ್ಯ. ಗೆಲ್ಲುವ ಎಲ್ಲಾ ಸಾಮರ್ಥ್ಯ ಇದ್ದಾಗಲೂ ಶಿವಕುಮಾರ್ ಅನಗತ್ಯವಾಗಿ ಕುಮಾರಸ್ವಾಮಿಯನ್ನು ಎದುರು ಹಾಕಿಕೊಳ್ಳಲು ಹೋಗಲ್ಲ. ಇನ್ನೊಂದೆಡೆ ತುಮಕೂರಿನಲ್ಲಿ ಜೆಡಿಎಸ್ ಬಲ ಚೆನ್ನಾಗಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ ಬೇರೆ. ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಿ ಕಳೆದ ಸಾರಿ ಜೆಡಿಎಸ್ನ ಸುಧಾಕರ್ ಲಾಲ್ ವಿರುದ್ಧ ಪರಮೇಶ್ವರ್ ಗೆದ್ದಿದ್ದು ಕೇವಲ 7,619 ಮತಗಳಿಂದ.
ಇದನ್ನೂ ಓದಿ:ಸಿಎಂ ಭೇಟಿಯಾದ ಅವಧೂತ: 3ನೇ ಅಲೆ ಬಗ್ಗೆ ಎಚ್ಚರ ಎಂದ ವಿನಯ್ ಗುರೂಜಿ
2013ರಲ್ಲಿ ಇದೇ ಅಭ್ಯರ್ಥಿ ವಿರುದ್ಧ ಸೋಲನುಭವಿಸಿದ್ದರು. ಆದ್ದರಿಂದ ಮುಂದಿನ ಚುನಾವಣೆ ಗೆಲ್ಲಲೇಬೇಕಾದರೆ ಆದಷ್ಟು ಜೆಡಿಎಸ್ ಜತೆ ಹೆಚ್ಚು ಕಿತ್ತಾಟ ಮಾಡಿಕೊಳ್ಳುವಂತಿಲ್ಲ. ಅಲ್ಲದೆ, ಕುಮಾರಸ್ವಾಮಿ ಪ್ರಚಾರಕ್ಕೆ ಹೆಚ್ಚಾಗಿ ಸುಳಿಯದಿದ್ದರೆ ಪರಮೇಶ್ವರ್ಗೆ ದೊಡ್ಡ ಅನುಕೂಲ. ಈ ಎಲ್ಲಾ ಲೆಕ್ಕಾಚಾರದಲ್ಲಿ ಮೂಲ ಕಾಂಗ್ರೆಸ್ ಸಿಎಂ ಆಕಾಂಕ್ಷಿಗಳಿದ್ದಾರೆ. ಇನ್ನು ಮುಂದಿನ ಚುನಾವಣೆಯಲ್ಲಿ ಗೆದ್ದು ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ವಲಸೆ ಕಾಂಗ್ರೆಸ್ಸಿಗರು ಹೇಳಿಕೊಳ್ಳುತ್ತಿದ್ದಾರೆ. ಇವರು ಉದ್ದೇಶಪೂರ್ವಕವಾಗಿ ಕುಮಾರಸ್ವಾಮಿ ಕಾಲೆಳೆಯುತ್ತಿದ್ದಾರೆ. ಒಂದೊಮ್ಮೆ ಕುಮಾರಸ್ವಾಮಿ ಕಾಂಗ್ರೆಸ್ ಮೇಲೆ ಸಿಟ್ಟಾದರೆ ಇತರೆ ಇಬ್ಬರು ಗೆಲ್ಲುವುದು ಕಷ್ಟವಾಗಲಿದೆ ಎಂಬ ಲೆಕ್ಕಾಚಾರ ಸಿದ್ದರಾಮಯ್ಯ ಬಣದ್ದು ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಮುಸ್ಲಿಂ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಗೆಲುವು ಸುಲಭ. ಹಾಗಾಗಿ ಜೆಡಿಎಸ್ ಹಾಗೂ ಕುಮಾರಸ್ವಾಮಿ ವಿರುದ್ಧ ತೀವ್ರ ಆರೋಪ, ಅವಹೇಳನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಡಿಕೆಶಿ, ಪರಮೇಶ್ವರ್ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ತಿರುವುಗಳು ಯಾವ ಸ್ವರೂಪ ಪಡೆಯಲಿವೆ ಎನ್ನುವುದನ್ನು ಕಾದು ನೋಡಬೇಕಿದೆ.