ಬೆಂಗಳೂರು: "ಗಾಂಧಿ ಭಾರತ" ಹೆಸರಲ್ಲಿ ವರ್ಷವಿಡೀ ಅರ್ಥಪೂರ್ಣ ಕಾರ್ಯಕ್ರಮ ಕೈಗೊಳ್ಳಲು ನಿರ್ಣಯ ತೆಗೆದುಕೊಳ್ಳಲಾಗಿದೆ.
1924 ರಲ್ಲಿ ಮಹಾತ್ಮಗಾಂಧಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣಾ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಿತು. ಸಭೆಯಲ್ಲಿ 1924 ರಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿದ್ದ ಡಿಸೆಂಬರ್ 26, 27 ರಂದು ಬೆಳಗಾವಿಯಲ್ಲಿ CWC ಸಭೆ ಜೊತೆಗೆ ಗಾಂಧಿ ತತ್ವಗಳ ಬಗ್ಗೆ ಕಾರ್ಯಕ್ರಮ ನಡೆಸಲು ನಿರ್ಣಯ ತೆಗೆದುಕೊಳ್ಳಲಾಯಿತು. ಇಡೀ ವಿಶ್ವಕ್ಕೆ ಸಂದೇಶ ಹೋಗುವ ದಿಕ್ಕಿನಲ್ಲಿ ಸಿದ್ಧತೆ ನಡೆಸಲು ತೀರ್ಮಾನಿಸಲಾಯಿತು.
ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನಿಮಿತ್ತ ಡಿಸೆಂಬರ್ 26 ಮತ್ತು 27ರಂದು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. ಶತಮಾನೋತ್ಸವ ಅಂಗವಾಗಿ ವರ್ಷವಿಡೀ ʻಗಾಂಧೀ ಭಾರತʼ ಹೆಸರಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತೆಗಳನ್ನು ಆರಂಭಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದರು.
ಡಿ.26ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ: ಬೆಳಗಾವಿಯಲ್ಲಿ ಡಿ.26ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಮತ್ತು ಡಿ.27ರಂದು ಸಾರ್ವಜನಿಕ ಸಭೆ ನಡೆಸಲು ನಿರ್ಧರಿಸಲಾಗಿದೆ. ಮೈಸೂರು ದಸರಾ ಮಾದರಿಯಲ್ಲಿ ಬೆಳಗಾವಿ ನಗರದ ಪ್ರಮುಖ 32 ಕಿಮೀ ಉದ್ದದ ರಸ್ತೆ ಹಾಗೂ 30 ವೃತ್ತಗಳ ದೀಪಾಲಂಕಾರ ಮಾಡಬೇಕು. ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳದಲ್ಲಿ ವೀರಸೌಧ ಅಭಿವೃದ್ಧಿ. ಈ ಸ್ಥಳದಲ್ಲಿ ಗ್ರಂಥಾಲಯ ಮತ್ತು ಗಾಂಧಿ ಪ್ರತಿಮೆ ಅನಾವರಣಗೊಳಿಸಲು ತೀರ್ಮಾನಿಸಲಾಗಿದೆ.
ತಾತ್ಕಾಲಿಕ ವಿರೂಪಾಕ್ಷ ಗೋಪುರ ನಿರ್ಮಾಣ: ಬೆಳಗಾವಿಯ 2.1 ಕಿ.ಮೀ ಉದ್ದದ ಕಾಂಗ್ರೆಸ್ ರಸ್ತೆಯಲ್ಲಿ ಶತಮಾನೋತ್ಸವದ ಸ್ಮಾರಕವಾಗಿ ತಾತ್ಕಾಲಿಕ ವಿರೂಪಾಕ್ಷ ಗೋಪುರ ನಿರ್ಮಾಣ, ರೈಲು ಮಾರ್ಗದ ತಡೆಗೋಡೆಯುದ್ದಕ್ಕೂ ಉಬ್ಬು ಶಿಲ್ಪಗಳ ನಿರ್ಮಾಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಕಣಬರಗಿಯಲ್ಲಿ ಗಂಗಾಧರ ರಾವ್ ದೇಶಪಾಂಡೆಯವರ ಸ್ಮಾರಕದಲ್ಲಿ ಮೂರ್ತಿ ಸ್ಥಾಪನೆ, ಮ್ಯೂಸಿಯಂ ಉದ್ಘಾಟಿಸಲಾಗುವುದು. ಹುದಲಿಯಲ್ಲಿ ಗಾಂಧೀ ಸ್ಮಾರಕ ಹಾಗೂ ಛಾಯಾಚಿತ್ರ ಗ್ಯಾಲರಿಯ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ.
ಗಾಂಧೀಜಿ ಅವರು ವಿವಿಧ ಕಾಲಘಟ್ಟಗಳಲ್ಲಿ ಭೇಟಿ ನೀಡಿದ ರಾಜ್ಯದ 120 ಸ್ಥಳಗಳಲ್ಲಿ ನೆನಪಿನ ಸ್ತಂಭಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಅಟನ್ ಬರೋ ನಿರ್ಮಿಸಿದ ಪ್ರಸಿದ್ಧ ʻಗಾಂಧಿʼ ಸಿನಿಮಾವನ್ನು ಕನ್ನಡದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಸುವರ್ಣ ವಿಧಾನಸೌಧದಲ್ಲಿ ಕಾಂಗ್ರೆಸ್ ಅಧಿವೇಶನ, ಸ್ವಾತಂತ್ರ್ಯ ಚಳವಳಿಯನ್ನು ಪ್ರತಿಬಿಂಬಿಸುವ ಛಾಯಾಚಿತ್ರ ಗ್ಯಾಲರಿ ನಿರ್ಮಾಣಕ್ಕೆ ಸೂಚಿಸಲಾಗಿದೆ. ಡಿ.26 ರಂದು ಗಣ್ಯ ಪ್ರತಿನಿಧಿಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಡಿ.27 ರಂದು ಸಾರ್ವಜನಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಶತಮಾನೋತ್ಸವದ ನೆನಪಿಗೆ ವಿಶೇಷ ಅಂಚೆ ಚೀಟಿ ಬಿಡುಗಡೆಗೆ ನಿರ್ಧರಿಸಲಾಗಿದೆ.
ಇದನ್ನೂ ಓದಿ: ಮತ್ತೆ ಬಂತು ಬೆಳಗಾವಿ ಅಧಿವೇಶನ: ಕಾಟಾಚಾರಕ್ಕೆ ಬರಬೇಡಿ; ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ಬನ್ನಿ ಅಂತಿದಾರೆ ಇಲ್ಲಿನ ಜನ