ಬೆಂಗಳೂರು: ''ಗೋಧ್ರಾ ಮಾದರಿಯ ಘಟನೆ ಕರ್ನಾಟಕದಲ್ಲಿಯೂ ನಡೆಯಬಹುದು ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರನ್ನು ತಕ್ಷಣವೇ ಬಂಧಿಸಬೇಕು'' ಎಂದು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸಂಜಯ ನಗರ ನಿವಾಸದಲ್ಲಿ ಬುಧವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿ ಕೆ ಹರಿಪ್ರಸಾದ್ ನೀಡಿದ ಗೋಧ್ರಾ ಹತ್ಯಾಕಾಂಡದ ಕುರಿತು ಹರಿಪ್ರಸಾದ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದರು. ಬಿ ಕೆ ಹರಿಪ್ರಸಾದ್ ಅವರಿಗೆ ಮೊದಲು ರಕ್ಷಣೆ ಕೊಡಬೇಕು. ಯಾಕೆಂದರೆ, ರಾಮ ಭಕ್ತರು ಅವರನ್ನೇ ಪುಡಿ ಪುಡಿ ಮಾಡ್ತಾರೆ, ಬಿ ಕೆ ಹರಿಪ್ರಸಾದ್ ಅವರನ್ನು ತಕ್ಷಣ ಬಂಧನ ಮಾಡಬೇಕು. ಅವರು ಪ್ರಚೋದನಾತ್ಮಕ ಹೇಳಿಕೆ ಕೊಟ್ಟು ರಾಮಭಕ್ತರನ್ನು ಪ್ರಚೋದಿಸಿದ್ದಾರೆ ಎಂದರು.
'' ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಅರೆಸ್ಟ್ ಮಾಡ್ತೀರಿ. ಈಗ ಪ್ರಚೋದನೆ ಕೊಟ್ಟಿರುವ ಬಿ ಕೆ ಹರಿಪ್ರಸಾದ್ ಅವರನ್ನೂ ಬಂಧಿಸಬೇಕು'' ಎಂದು ಡಿವಿಎಸ್ ಒತ್ತಾಯಿಸಿದರು.
ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬ ಸಿಎಂ ಟೀಕೆ ವಿಚಾರಕ್ಕೆ ಟಾಂಗ್ ನೀಡಿದ ಸದಾನಂದಗೌಡ ಅವರು, ''ನಮ್ದು ಒಂದು ಬಾಗಿಲೋ, ಮೂರು ಬಾಗಿಲೋ ಎಂದು ಯೋಚನೆ ಮಾಡ್ತಾ ಕುಳಿತರೆ ಆಡಳಿತ ಸುಸೂತ್ರವಾಗಿ ನಡೆಸಲು ಸಾಧ್ಯವಿಲ್ಲ. ಅವರಲ್ಲಿ ಎಷ್ಟು ಬಾಗಿಲು ಇವೆ ಎಂಬುದನ್ನು ಸಿಎಂ ನೋಡಿಕೊಳ್ಳಲಿ. ಸಿದ್ದರಾಮಯ್ಯ ಬೇರೆ ಪಕ್ಷದ ಮೇಲೆ ಕಣ್ಣಿಟ್ಟು ಕೆಲಸ ಮಾಡುವುದಲ್ಲ. ಜನರ ಸಮಸ್ಯೆಗಳ ಮೇಲೆ ಕಣ್ಣಿಟ್ಟು ಕೆಲಸ ಮಾಡಲಿ. ಬಿಜೆಪಿಯಲ್ಲಿ ಒಂದು ಕಾಲದಲ್ಲಿ ಮೂರು ಬಾಗಿಲಿತ್ತು ನಿಜ. ಆದರೆ, ಇವಾಗ ಎಲ್ಲಾ ಬಾಗಿಲುಗಳನ್ನು ಬಂದ್ ಮಾಡಿ, ಒಂದು ಬಾಗಿಲು ಮಾಡಿದ್ದೇವೆ. ಇದು ಅವರಿಗೆ ಗೊತ್ತಾಗಿಲ್ಲ ಅಂದ್ರೆ ಹೇಗೆ'' ಎಂದು ಪ್ರಶ್ನಿಸಿದರು.
''ಕಾಂಗ್ರೆಸ್ ನಲ್ಲಿರುವ ಗುಂಪು ನಮ್ಮಲ್ಲಿ ಇಲ್ಲವೇ ಇಲ್ಲ. ಸಿಎಂ ಏನೋ ಮಾಡಿಕೊಂಡಿದ್ದಾರಲ್ಲ. ಆರ್ಥಿಕ ಸಲಹೆಗಾರರಾಗಿ, ವಿವಿಧ ಸಲಹೆಗಾರರಾಗಿ ಮಾಡಿಕೊಂಡಿರೋದು, ಅವರ ಬಾಗಿಲುಗಳನ್ನು ಬಂದ್ ಮಾಡಿಕೊಳ್ಳೋದಕ್ಕಾ?'' ಎಂದು ಸಿಎಂ ಸಿದ್ದರಾಮಯ್ಯಗೆ ಡಿವಿಎಸ್ ತಿರುಗೇಟು ನೀಡಿದರು. ''ರಾಮಾಯಣ ಕಾಲದ ಆಂಜನೇಯನೇ ಬೇರೆ ಈ ಕಾಲದ ಆಂಜನೇಯನೇ ಬೇರೆ. ಇಬ್ಬರಿಗೂ ಬಹಳ ವ್ಯತ್ಯಾಸ ಇದೆ. ಆ ಆಂಜನೇಯನಿಗೆ ಬಾಲವಿತ್ತು, ಲಂಕೆಯನ್ನು ದಹನ ಮಾಡಲು ಶಕ್ತಿ ಇತ್ತು, ಇವರಿಗೆ ಬಾಲನೂ ಇಲ್ಲ'' ಎಂದು ನಗುತ್ತಾ ಸಿದ್ದರಾಮಯ್ಯ ಹೆಸರಲ್ಲಿ ರಾಮ ಇರುವ ಬಗ್ಗೆ ಮಾಜಿ ಸಚಿವ ಆಂಜನೇಯ ಹೇಳಿಕೆಗೆ ವ್ಯಂಗ್ಯವಾಡಿದರು.
ಇದನ್ನೂ ಓದಿ: ಶ್ರೀಕಾಂತ್ ಪೂಜಾರಿಯನ್ನು ಬಂಧಿಸದೇ ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ: ಸಿಎಂ ಸಿದ್ದರಾಮಯ್ಯ