ಬೆಂಗಳೂರು: 2022ನೇ ಸಾಲಿನ 'ಕುವೆಂಪು ರಾಷ್ಟ್ರೀಯ ಪುರಸ್ಕಾರ'ಕ್ಕೆ ತಮಿಳು ಭಾಷೆಯ ಸುಪ್ರಸಿದ್ಧ ಬರಹಗಾರ ಇಮಯಮ್ ಆಯ್ಕೆ ಆಗಿದ್ದಾರೆ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಹಂಗಾಮಿ ಅಧ್ಯಕ್ಷ ಡಾ.ಬಿ ಎಲ್ ಶಂಕರ್ ತಿಳಿಸಿದ್ದಾರೆ.
ಚಿತ್ರಕಲಾ ಪರಿಷತ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನವೆಂಬರ್ 20 ರಂದು ಬೆಂಗಳೂರಿನಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಆಯ್ಕೆ ಸಮಿತಿಯ ಸಭೆ ನಡೆದಿತ್ತು. ಕ್ರೈಸ್ಟ್ ವಿಶ್ವದ್ಯಾಲಯದ ನಿವೃತ್ತ ತಮಿಳು ಪ್ರಾಧ್ಯಾಪಕರಾದ ಡಾ. ಕೃಷ್ಣಸ್ವಾಮಿ, ಮದ್ರಾಸ್ ವಿಶ್ವವಿದ್ಯಾಲಯದ ಡಾ. ತಮಿಳ್ ಸೆಲ್ವಿ ಹಾಗೂ ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿಗಳಾದ ಡಾ. ಅಗ್ರಹಾರ ಕೃಷ್ಣಮೂರ್ತಿಯವರು ತೀರ್ಪುಗಾರರಾಗಿದ್ದರು.
ಸರ್ವಾನುಮತದಿಂದ ಆಯ್ಕೆ: ಪ್ರತಿಷ್ಠಾನದ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಪ್ರೊ. ಹಂಪನಾ ಅವರು ವಿಶೇಷ ಆಹ್ವಾನಿತರಾಗಿದ್ದು, ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಸಂಚಾಲಕರಾಗಿದ್ದರು. ಒಟ್ಟು 9 ಹೆಸರುಗಳನ್ನು ಆಯ್ಕೆ ಮಾಡಿ ಅದನ್ನು ಮೂರು ಹೆಸರಿಗೆ ಇಳಿಸಲಾಯಿತು. ಅಂತಿಮವಾಗಿ ತಮಿಳು ಸಾಹಿತ್ಯದ ಶ್ರೀಮಂತಿಕೆ ಹಾಗೂ ಸತ್ಯವನ್ನು ತಮ್ಮ ಮಹತ್ವದ ಕೃತಿಗಳ ಮೂಲಕ ಹೆಚ್ಚಿಸಿದ, ವರ್ತಮಾನದ ಬಹು ಮಹತ್ವದ ಲೇಖಕರಾದ, 'ಇಮಯಮ್' ಎಂದೇ ಖ್ಯಾತರಾಗಿರುವ ವಿ. ಅಣ್ಣಾಮಲೈ ಅವರನ್ನು 2022ರ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.
ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದಂದು (29-12-2022 ಗುರುವಾರ) ಇಮಯಮ್ ಅವರಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರವನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಐದು ಲಕ್ಷ ರೂಪಾಯಿ ನಗದು ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿ ಸ್ವೀಕಾರಕ್ಕೆ ಇಮಯಮ್ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಒಡಿಶಾದ ಖ್ಯಾತ ಕವಿಗೆ ಒಲಿದ ಕುವೆಂಪು ರಾಷ್ಟ್ರೀಯ ಪುರಸ್ಕಾರ
ಈವರೆಗೆ ವಿವಿಧ ಭಾಷೆಯ 9 ಬರಹಗಾರರಿಗೆ ಪ್ರಶಸ್ತಿ ನೀಡಲಾಗಿದ್ದು, ಇದೇ ಮೊದಲ ಬಾರಿಗೆ ತಮಿಳು ಲೇಖಕರಿಗೆ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ಕಾರದ ಸಚಿವರು, ಕೇಂದ್ರದ ಸಚಿವರಿಗೂ ಆಹ್ವಾನ ನೀಡಲಾಗುತ್ತದೆ.
ಸ್ಮಾರಕಕ್ಕೆ ಕವಿಶೈಲ ನಿದರ್ಶನ: ಷೇಕ್ಸ್‌ಪಿಯರ್, ರವೀಂದ್ರನಾಥ ಠಾಗೋರ್ ಸ್ಮಾರಕಕ್ಕೆ ಸರಿಸಮನಾದ ಸ್ಮಾರಕ ಕುವೆಂಪು ಅವರಿಗೆ ಮಾಡಲಾಗಿದೆ. ಪ್ರತಿಯೊಬ್ಬರೂ ನೋಡಲೇಬೇಕಾದ ಸ್ಮಾರಕವಾಗಿದೆ. ಕವಿಶೈಲದಲ್ಲಿ ಕುಳಿತರೆ ಸಹ್ಯಾದ್ರಿಯ ಶಿಖರಗಳು ಕಾಣಲಿವೆ. ಯಾವ ರೀತಿ ಸ್ಮಾರಕ ಕಟ್ಟಬಹುದು, ನಿರ್ವಹಣೆ ಮಾಡಬಹುದು ಎನ್ನುವುದಕ್ಕೆ ಕವಿಶೈಲ ನಿದರ್ಶನವಾಗಿದೆ ಎಂದರು.