ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಉಸ್ತುವಾರಿ ವಹಿಸಿರುವ ಸಿಬಿಐ ಹಿರಿಯ ಅಧಿಕಾರಿ ಎ. ವೈ.ವಿ ಕೃಷ್ಣ ಅವರನ್ನು ತನಿಖಾಧಿಕಾರಿ ಸ್ಥಾನದಲ್ಲಿ ಮುಂದುವರಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಸಿಬಿಐ ಪರ ವಕೀಲರಾದ ಪಿ. ಪ್ರಸನ್ನ ಕುಮಾರ್ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸಿಬಿಐ ಪರ ವಕೀಲ ಪಿ. ಪ್ರಸನ್ನ ಕುಮಾರ್ ಅವರು ಮಾಹಿತಿ ನೀಡಿ, ಪ್ರಕರಣದ ತನಿಖೆಯ ಸಂಪೂರ್ಣ ಉಸ್ತುವಾರಿ ವಹಿಸಿರುವ ಹೈದರಾಬಾದ್ ಘಟಕದ ಜಂಟಿ ನಿರ್ದೇಶಕ ಎ.ವೈ. ವಿ ಕೃಷ್ಣ ಅವರ ಎರವಲು ಸೇವೆ ಅವಧಿ ಜನವರಿ17ಕ್ಕೆ ಪೂರ್ಣಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಸ್ಥಾನದಲ್ಲಿ ಅವರನ್ನು ಮುಂದುವರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಕೇಂದ್ರದ ಪರ ಹಾಜರಿದ್ದ ಸಹಾಯಕ ಸಾಲಿಸಿಟರ್ ಜನರಲ್ ಸಿ. ಶಶಿಕಾಂತ್, ತನಿಖಾಧಿಕಾರಿ ಸ್ಥಾನದಲ್ಲಿ ಕೃಷ್ಣ ಅವರನ್ನು ಮುಂದುವರಿಸುವುದಕ್ಕೆ ಸಂಬಂಧಿಸಿದ ಕಡತ, ಕೇಂದ್ರ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಸಚಿವಾಲಯದ ಮುಂದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದರು. ಇದನ್ನು ಪರಿಗಣಿಸಿದ ಪೀಠ, ಅರ್ಜಿ ವಿಚಾರಣೆಯನ್ನು ಜನವರಿ 22ಕ್ಕೆ ಮುಂದೂಡಿತಲ್ಲದೆ, ಅಲ್ಲಿಯವರೆಗೆ ಪ್ರಕರಣದ ತನಿಖೆ ಎಂದಿನಂತೆ ಮುಂದುವರಿಸಲು ಸಿಬಿಐಗೆ ಸೂಚಿಸಿತು.