ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಅವರನ್ನು ಸತತ ಮೂರು ಗಂಟೆಗಳಿಂದ ವಿಚಾರಣೆ ನಡೆಸುತ್ತಿದೆ.
ಬೆಳಗ್ಗೆ 11 ಗಂಟೆಯಿಂದ ವಿಚಾರಣೆ ಆರಂಭಿಸಿರುವ ಎಸ್ಐಟಿ ಮುಖ್ಯಸ್ಥ ರವಿಕಾಂತೇಗೌಡ, ಜಮೀರ್ರ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಮನ್ಸೂರ್ನೊಂದಿಗೆ ಹೊಂದಿರುವ ಹಣಕಾಸಿನ ಸಂಬಂಧದ ಬಗ್ಗೆ ಪ್ರಶ್ನಿಸುತ್ತಿದ್ದಾರೆ.
ರಿಚ್ಮಂಡ್ ರಸ್ತೆಯಲ್ಲಿರುವ ನಿವೇಶನವನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಹಣಕ್ಕೆ ಏಕೆ ಮಾರಾಟ ಮಾಡಿದ್ದೀರಿ ? ಎಷ್ಟು ವರ್ಷಗಳಿಂದ ಮನ್ಸೂರ್ನೊಂದಿಗೆ ಒಡನಾಟವಿತ್ತು ಎಂಬುದು ಸೇರಿದಂತೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪ್ರಶ್ನಿಸಿದೆ ಎನ್ನಲಾಗಿದೆ.
ಮನ್ಸೂರ್ ಜೊತೆ ಬೇರೆ ಬೇರೆ ವ್ಯವಹರ ನಡೆಸಿರುವ ದಾಖಲೆ ಸಿಕ್ಕಿದೆ. ಮನ್ಸೂರ್ನನ್ನು ಬಚಾವ್ ಮಾಡಲು ಐಎಂಎಯಲ್ಲಿ ಹೂಡಿಕೆ ಮಾಡಿದ್ದ ಹಣ ಪಡೆದಿದ್ದೀರಿ ಎಂಬ ಆರೋಪ ನಿಮ್ಮ ಮೇಲಿದೆ. ಮೇಲಾಗಿ ಮನ್ಸೂರ್ ವಂಚಕ ಎಂದು ಗೊತ್ತಿದ್ದರೂ ನೀವೂ ಹಣ ಹೂಡಿಕೆ ಮಾಡಿಸಿದ್ದು ಯಾಕೆ..? ಕಾರ್ಪೋರೇಟರ್ ಮುಜಾಹಿದ್ ಮೂಲಕ ಐಎಂಎಗೆ ಹಣ ಬಂದಿರೋದು ನಿಜಾನಾ? ಎಂಬಿತ್ಯಾದಿ ಪ್ರಶ್ನೆ ಕೇಳಿದ್ದು, ಉತ್ತರಿಸಲು ಜಮೀರ್ ತಡಬಡಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.