ಬೆಂಗಳೂರು: ಐಎಂಎ ಮಹಾ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಈ ವೇಳೆ ಪ್ರಭಾವಿಗಳ ಹೆಸರು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಐಎಂಎ ಮಾಲೀಕ ಮನ್ಸೂರ್ ಖಾನ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಆ.1ರವರೆಗೆ ವಶಕ್ಕೆ ಪಡೆದಿದ್ದಾರೆ. ಈ ವರೆಗಿನ ವಿಚಾರಣೆಯಲ್ಲಿ ಮಹತ್ವದ ಮಾಹಿತಿಯಿರುವ ಡೈರಿ ಲಭ್ಯವಾಗಿದ್ದು, ಹಲವು ರಾಜಕಾರಣಿಗಳು ಹಾಗೂ ಪ್ರಭಾವಿಗಳ ಹೆಸರುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಈ ಹಿಂದಿನ ದೋಸ್ತಿ ಸರ್ಕಾರದ ಶಾಸಕರು, ಕಾರ್ಪೋರೇಟರುಗಳು ಸೇರಿದಂತೆ ಸುಮಾರು 15 ಜನರ ಹೆಸರಿದೆ ಎನ್ನಲಾಗಿದ್ದು, ಐಎಂಎ ಸಂಸ್ಥೆಯ ಬ್ರ್ಯಾಂಡ್ ಹೆಚ್ಚಿಸಲು ರಾಜಕಾರಣಿಗಳು ಹಾಗೂ ಪ್ರಭಾವಿಗಳಿಗೆ ಹಣ ನೀಡಿದ್ದರ ಕುರಿತು ನಮೂದಿಸಲಾಗಿದೆ ಎಂದು ತನಿಖಾ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಂಸ್ಥೆಯ 7 ಮಂದಿ ನಿರ್ದೇಶಕರ ಪೈಕಿ ನವೀದ್ ಅಹಮದ್ ಹಾಗೂ ಅಫ್ಜಲ್ ಪಾಷ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಡೈರಿಯಲ್ಲಿ ಬರೆದಿರುವ ಹೆಸರುಗಳ ಬಗ್ಗೆ ಪ್ರತ್ಯೇಕವಾಗಿ ED ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಉತ್ತರ ಭಾರತದ ನಾನಾಕಡೆ ವಿವಿಧ ಉದ್ದಿಮೆಗಳಲ್ಲಿ ಮನ್ಸೂರ್ ಹೂಡಿಕೆ ಮಾಡಿದ್ದ ಎಂಬ ವಿಚಾರ ತನಿಖಾಧಿಕಾರಿಗಳಿಗೆ ಗೊತ್ತಾಗಿದೆ.