ಬೆಂಗಳೂರು: ನಗರದ ಶ್ರೀರಾಂಪುರದಲ್ಲಿರುವ ಪುರಾತನ ಶ್ರೀರಾಮಚಂದ್ರ ದೇವಾಲಯದ ಮೇಲ್ಭಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಒಂದು ಮತ್ತು ಎರಡನೇ ಮಹಡಿ ಕಟ್ಟಡಗಳನ್ನು ಮುಂದಿನ 6 ವಾರಗಳಲ್ಲಿ ತೆರವು ಮಾಡುವಂತೆ ಬಿಬಿಎಂಪಿಗೆ ಹೈಕೋರ್ಟ್ ಆದೇಶಿಸಿದೆ.
ಬಿಬಿಎಂಪಿಯಿಂದ ಅನುಮತಿ ಪಡೆಯದೇ ಹಾಗೂ ಧಾರ್ಮಿಕ ಪರಿಕಲ್ಪನೆಗೆ ವಿರುದ್ಧವಾಗಿ ದೇವಸ್ಥಾನದ ಟ್ರಸ್ಟ್ನವರು ಎರಡು ಅಂತಸ್ತಿನ ಕಟ್ಟಡ ನಿರ್ಮಿಸಿದ್ದು, ಅವುಗಳನ್ನು ತೆರವು ಮಾಡಿಸಲು ಸೂಕ್ತ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಆರ್ ಆನಂದ್ ದಾಖಲಿಸಿದ್ದ ಪಿಐಎಲ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ ಮುಂದಿನ ಆರು ವಾರಗಳಲ್ಲಿ ದೇವಸ್ಥಾನದ ಮೇಲೆ ಅನಧಿಕೃತವಾಗಿ ನಿರ್ಮಿಸಿರುವ ಎರಡು ಮಹಡಿ ತೆರವು ಮಾಡಿ ಆ ಕುರಿತು ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿ, ವಿಚಾರಣೆಯನ್ನು ಮಾ.30ಕ್ಕೆ ಮುಂದೂಡಿತು.
ಅರ್ಜಿದಾರರಾದ ಟಿಆರ್ ಆನಂದ್, ದೇವಸ್ಥಾನದ ಆಡಳಿತ ಸಮಿತಿಯವರು ದೇವಾಲಯದ ಪರಿಕಲ್ಪನೆಗೆ ವಿರುದ್ಧವಾಗಿ ಗರ್ಭಗುಡಿಯ ಮೇಲೆ ಅರ್ಚಕರಿಗೆ ವಾಸಿಸಲು ಕಟ್ಟಡ ನಿರ್ಮಿಸಿದ್ದಾರೆ. ದೇವಾಲಯದ ಮೇಲೆ ಶೌಚಾಲಯ ನಿರ್ಮಿಸಲಾಗಿದೆ. ಈ ರೀತಿ ಗರ್ಭಗುಡಿ ಮೇಲೆ ಕಟ್ಟಡ ನಿರ್ಮಿಸುವುದು ಆಗಮಶಾಸ್ತ್ರದ ನಿಯಮಗಳಿಗೆ ವಿರುದ್ಧವಾದುದು. ಈ ಕಟ್ಟಡಗಳನ್ನು ತೆರವು ಮಾಡುವುದು ಸೂಕ್ತ ಎಂದು ಮುಜರಾಯಿ ಇಲಾಖೆ ತಜ್ಞರು ಮತ್ತು ಧಾರ್ಮಿಕ ಪಂಡಿತರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆದರೆ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಹೈಕೋರ್ಟ್ ಗೆ 2018 ಡಿ.21ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.