ಬೆಂಗಳೂರು : ಸಿಲಿಕಾನ್ ಸಿಟಿಯ ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಂಡ ತನ್ನ ಹೆಂಡತಿಯನ್ನ ನಡುರಸ್ತೆಯಲ್ಲಿ ಕೊಲೆ ಮಾಡಿದ ಪ್ರಕರಣ ಸಂಬಂಧ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಆರೋಪಿ ಮಂಜುನಾಥ್ ನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ. ಅಲ್ಲದೇ ಅನ್ಯ ಯುವತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಹೀಗಾಗಿ ಕೊಲೆಯಾದ ಹೇಮಾ ಗಂಡನಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾಳೆ. ಈ ಮೊದಲು ಇದೇ ವಿಚಾರವಾಗಿ ಗಂಡನ ಜೊತೆ ಚರ್ಚಿಸಿದ್ದಳು. ಆದರೆ, ಪತ್ನಿ ಮಾತಿಗೆ ಒಪ್ಪದ ಆರೋಪಿ ಮಂಜುನಾಥ್ ಮನೆಯಲ್ಲಿ ಕುಡಿದು ಪದೇಪದೆ ಗಲಾಟೆ ಮಾಡುತ್ತಿದ್ದ.
ಕಳೆದ ಎರಡು ದಿನಗಳಿಂದ ಇದೇ ವಿಚಾರವಾಗಿ ಗಲಾಟೆಯಾಗಿದೆ. ಹೇಮಾ ನಿನ್ನೆ ಸಂಜೆ ಪೊಲೀಸ್ ಠಾಣೆಗೆ ದೂರು ಕೊಡ್ತೀನಿ ಎಂದು ಮನೆಯಿಂದ ಬರುತ್ತಿದ್ದಳು. ಈ ವೇಳೆ ಆರೋಪಿ ನಿನ್ನ ಕೊಲೆ ಮಾಡಿ, ನಾನೇ ಸ್ಟೇಷನ್ಗೆ ಹೋಗ್ತೀನಿ ಎಂದು ಪತ್ನಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆದರೆ, ಹಲ್ಲೆ ವೇಳೆ ಪತಿಯಿಂದ ತಪ್ಪಿಸಿಕೊಂಡು ಹೇಮಾ ಹೋಗುತ್ತಿದಾಗ, ಹಿಂಬಾಲಿಸಿ ಬಂದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ವಿಚಾರ ಬಯಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನ ಹೆಚ್ಚಿನ ತನಿಖೆಗೊಳಪಡಿಸಿದ್ದಾರೆ.
ಹಿನ್ನೆಲೆ : ಕಳೆದ 10 ವರ್ಷಗಳ ಹಿಂದೆ ಕುಣಿಗಲ್ ಮೂಲದ ಮಂಜುನಾಥ್ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹೇಮಾ ಎಂಬಾಕೆಯನ್ನ ಮದುವೆಯಾಗಿದ್ದ. ನಂತರ ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಮಕ್ಕಳ ಜೊತೆ ವಾಸವಿದ್ದರು. ಆದರೆ, ಕಳೆದ ಕೆಲ ವರ್ಷಗಳಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ನಿನ್ನೆ ಕೊಲೆಯಲ್ಲಿ ಅಂತ್ಯವಾಗಿದೆ.