ಬೆಂಗಳೂರು: ಕೇಂದ್ರ ಸರ್ಕಾರ ಸ್ಥಾಪಿಸಿರುವ ಸ್ವರ್ಣ ಜಯಂತಿ ಶಿಷ್ಯವೇತನದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮುಂಚೂಣಿ ಸ್ಥಾನ ಕಾಪಾಡಿಕೊಂಡು ಬಂದಿದೆ. ಮೂಲ ವಿಜ್ಞಾನದ ಸಂಶೋಧನೆಯಲ್ಲಿ ನಿರತರಾಗಿರುವ ಯುವ ವಿಜ್ಞಾನಿಗಳಿಗೆ ಕೊಡ ಮಾಡುವ ಫೆಲೋಶಿಪ್ಗೆ ದೇಶಾದ್ಯಂತ 21 ಯುವ ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ನಾಲ್ವರು ಐಐಎಸ್ಸಿ ಸಂಶೋಧಕರು ಇದ್ದಾರೆ.
ಭಾರತದ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಹಿನ್ನೆಲೆ 1997 ರಿಂದ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸ್ವರ್ಣ ಜಯಂತಿ ಫೆಲೋಶಿಪ್ ಆರಂಭಿಸಿತು. ರಾಸಾಯನಿಕ ವಿಜ್ಞಾನ, ಜೀವ ವಿಜ್ಞಾನ, ಗಣಿತ, ಇಂಜಿನಿಯರಿಂಗ್ ಮುಂತಾದ ಮೂಲ ವಿಜ್ಞಾನ ಸಂಶೋಧನೆ ನಡೆಸುತ್ತಿರುವ 40 ವರ್ಷದೊಳಗಿನ ವಿಜ್ಞಾನಿಗಳಿಗೆ ಫೆಲೋಶಿಪ್ ನೀಡಲಾಗುತ್ತದೆ. ಐದು ಲಕ್ಷ ರೂ ಧನಸಹಾಯ, ಮಾಸಿಕ 25 ಸಾವಿರ ರೂ ವೇತನ ಜೊತೆಗೆ ಉಪಕರಣ ಖರೀದಿ, ಪ್ರವಾಸದ ವೆಚ್ಚವನ್ನು ನೀಡಲಾಗುತ್ತದೆ.
ಪ್ರತಿ ವರ್ಷ 10-15 ಜನರನ್ನು ಆಯ್ಕೆ ಮಾಡುತ್ತಿದ್ದ ಕೇಂದ್ರ ಸರ್ಕಾರ ಈ ವರ್ಷ 21 ಜನರಿಗೆ ಫೆಲೋಶಿಪ್ ನೀಡಿದೆ. ಬೆಂಗಳೂರಿನ ಐಐಎಸ್ಸಿಯಲ್ಲಿ ಪಾಲಿಮರ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಸಹಾಯಕ ಪ್ರಾಧ್ಯಾಪಕ ಡಾ. ಸೂರ್ಯಾಸರಥಿ ಬೋಸ್, ಅನುವಂಶಿಕ ಕ್ಷೇತ್ರದ ಸಹಾಯಕ ಪ್ರಾಧ್ಯಾಪಕ ಡಾ. ಸಂದೀಪ್ ಈಶ್ವರಪ್ಪ, ವಾತಾವರಣ ಬದಲಾವಣೆ ಕುರಿತು ಸಂಶೋಧನೆ ನಡೆಸುತ್ತಿರುವ ಸಹಾಯಕ ಪ್ರಾಧ್ಯಾಪಕ ಡಾ. ಮಿಶ್ರ ಹಾಗೂ ಗಣಿತ ವಿಭಾಗದ ಡಾ. ಮಹೇಶ್ ಕಾಕಡೆ ಆಯ್ಕೆಯಾಗಿದ್ದಾರೆ.