ಬೆಂಗಳೂರು: ಜೆಡಿಎಸ್‌ಗೆ ನಿಷ್ಟಾವಂತರಾಗಿ ದುಡಿದ ಕಾರ್ಯಕರ್ತರನ್ನು ನಾನು ನಿರ್ಲಕ್ಷಿಸಿದ್ದೇನೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಭಾವುಕರಾಗಿ ನುಡಿದ ಸನ್ನಿವೇಶ ಭಾನುವಾರ ನಡೆದಿದೆ.
ಜೆ.ಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ನ ನಿಷ್ಠಾವಂತ ಕೆಲಸಗಾರರಿಗೆ ಯಾವುದೇ ಸೂಕ್ತ ಸ್ಥಾನಮಾನವನ್ನು ನೀಡಲಾಗಲಿಲ್ಲ. ಇದು ಅತ್ಯಂತ ನೋವಿನ ಸಂಗತಿ ಎಂದರು.
ಶಾಸಕರ ಅನರ್ಹತೆ ವಿಚಾರವಾಗಿ ಮಾತನಾಡಿದ ಅವರು, ಪಕ್ಷಾಂತರ ನಿಷೇಧ ಕಾನೂನು ಜಾರಿಗೆ ಬಂದ ಮೇಲೆ ಅನೇಕ ರೀತಿಯ ತೀರ್ಪುಗಳು ಪ್ರಕಟವಾಗಿವೆ. ಈ ದೇಶದಲ್ಲಿ ವಿವಿಧ ರಾಜ್ಯದ ಸಭಾಧ್ಯಕ್ಷರು ತೀರ್ಪು ನೀಡಿದ್ದಾರೆ. ಆದರೆ, ಭಾನುವಾರ ಕರ್ನಾಟಕದ ಸ್ಪೀಕರ್ ವಿಶೇಷ ತೀರ್ಪು ಕೊಟ್ಟಿದ್ದಾರೆ ಎಂದು ಕೊಂಡಾಡಿದ್ರು.
ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ. ಅವರು ಯಾವುದೇ ಒತ್ತಡಕ್ಕೆ ಮಣಿದು ಶಾಸಕರನ್ನು ಅನರ್ಹಗೊಳಿಸಿಲ್ಲ. ಅವರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ರಮೇಶಕುಮಾರ್ ಅವರು ನ್ಯಾಯ, ಸಂವಿಧಾನದ ಪರ ದನಿ ಎತ್ತಿದ್ದಾರೆ. ಅದೇ ಕಾರಣಕ್ಕೆ ಅವರು ರಾಜೀನಾಮೆ ಪತ್ರವನ್ನು ಸದನದಲ್ಲಿ ತೋರಿಸಿದ್ದು ಎಂದರು.
ಮೈತ್ರಿ ಮುಂದುವರಿಸುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತಾರೋ ಅದರ ಪ್ರಕಾರ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.