ಬೆಂಗಳೂರು: ಅಗ್ನಿ ಸುರಕ್ಷತಾ ಪ್ರಮಾಣಪತ್ರ ಪಡೆಯಲು ಅಡ್ಡಿಯಾದ ಮರ ಕಡಿದು, ಅಷ್ಟೇ ಸಂಖ್ಯೆಯ ಗಿಡಗಳನ್ನು ವೃಕ್ಷ ಅಧಿಕಾರಿಯ ಸಮ್ಮುಖದಲ್ಲಿ ನೆಟ್ಟರೆ ಮಾತ್ರ ಅನುಮತಿ ನೀಡಬಹುದು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಮಂತ್ರಿ ಎಲಿಗನ್ಸ್ ಅಪಾರ್ಟ್ಮೆಂಟ್ ಮಾಲೀಕರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ನಗರದ ಅಪಾರ್ಟ್ಮೆಂಟ್ಯೊಂದಕ್ಕೆ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ನೀಡುವುದಕ್ಕೆ ಅಡ್ಡಿಯಿರುವ 49 ಮರಗಳನ್ನು ವೃಕ್ಷ ಅಧಿಕಾರಿಯ ಸಮ್ಮುಖದಲ್ಲಿ ತೆರವು ಮಾಡುವುದಕ್ಕೆ ಅವಕಾಶ ನೀಡಬೇಕು. ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಲಭ್ಯವಾದ ಬಳಿಕ ಮರ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಅಷ್ಟೇ ಸಂಖ್ಯೆಯ ಗಿಡಗಳನ್ನು ನೆಡಬೇಕು ಎಂದು ಸೂಚನೆ ನೀಡಿ ಕೋರ್ಟ್ ಅರ್ಜಿಯನ್ನು ಪುರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ: ಬನ್ನೇರುಘಟ್ಟ ರಸ್ತೆಯಲ್ಲಿರುವ ಮಂತ್ರಿ ಎಲಿಜೆನ್ಸ್ ಅಪಾರ್ಟ್ಮೆಂಟ್ನಲ್ಲಿ ಮಾಲೀಕರ ಸಂಘದಿಂದ ಅಗ್ನಿ ಸುರಕ್ಷತಾ ಪ್ರಮಾಣಪತ್ರ ನವೀಕರಣ ಮಾಡುವಂತೆ ಕೋರಿ ಗೃಹ ರಕ್ಷದಳ ವಿಭಾಗದ ಪೊಲೀಸ್ ಮಹಾನಿರ್ದೇಶನಕರಿಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ 2021ರ ಅಕ್ಟೋಬರ್ 5ರಂದು ಗೃಹರಕ್ಷಕ ದಳ ಅಧಿಕಾರಿಗಳು ಅಪಾರ್ಟ್ಮೆಂಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಅಪಾರ್ಟ್ಮೆಂಟ್ ಆವರಣ ಮತ್ತು ಸುತ್ತಮುತ್ತಲ ಭಾಗಗಳಲ್ಲಿ ದೊಡ್ಡ ಮಟ್ಟದ ಗಿಡಗಳು ಮತ್ತು ಕಟ್ಟಡದ ಸುತ್ತಲಿನ ಭಾಗಗಳಲ್ಲಿ ಸಣ್ಣ ಕುರುಚಲ ಗಿಡಗಳು ಬೆಳೆದಿವೆ. ಇದರಿಂದ ತುರ್ತು ವಾಹನಗಳು ಕಟ್ಟಡ ಆವರಣಕ್ಕೆ ಪ್ರವೇಶಿಸಲು ಕಷ್ಟ ಸಾಧ್ಯವಾಗಲಿದೆ. ಹೀಗಾಗಿ ಅಗ್ನಿ ಸುರಕ್ಷತಾ ಪ್ರಮಾಣ ಪತ್ರವನ್ನು ನವೀಕರಣ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿ ಮನವಿಯನ್ನು ತಿರಸ್ಕರಿಸಿದ್ದರು. ಅಲ್ಲದೆ, 2022ರ ಮಾರ್ಚ್ 23ರಂದು ಗೃಹ ರಕ್ಷಕದಳದ ಪೊಲೀಸ್ ಮಹಾನಿರ್ದೇಶಕರು ಮುಂದಿನ 15 ದಿನಗಳಲ್ಲಿ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆಯದಿದ್ದಲ್ಲಿ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ನೋಟಿಸ್ ಕಳಿಸಿ ಎಚ್ಚರಿಕೆ ನೀಡಿದ್ದರು.
ಇದರಿಂದ ಗೊಂದಲಕ್ಕೆ ಸಿಲುಕಿದ್ದ ಅಪಾರ್ಟ್ಮೆಂಟ್ ಮಾಲೀಕರ ಸಂಘ, ಅಪಾರ್ಟ್ಮೆಂಟ್ ಆವರಣದಲ್ಲಿ ಸುರಕ್ಷತಾ ವಾಹನಗಳ ಪ್ರವೇಶಕ್ಕೆ ಅಡ್ಡಿಯಿದ್ದ 49 ಮರಗಳನ್ನು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆ 1976ರ ಪ್ರಕಾರ ಕಾನೂನು ಬದ್ಧವಾಗಿ ತೆರವುಗೊಳಿಸಲು ಅನುಮತಿ ನೀಡುವಂತೆ ಕೋರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವಲಯ ಅರಣ್ಯಾಧಿಕಾರಿಗಳು, ಅಪಾರ್ಟ್ಮೆಂಟ್ ಸುತ್ತಲ ಪ್ರದೇಶದಲ್ಲಿ ಬೆಳೆದಿರುವ ಮರಗಳು ಯಾರ ಆಸ್ತಿ, ಪಾಸ್ತಿ ಹಾಗೂ ಜೀವಕ್ಕೆ ಹಾನಿಯಾಗುತ್ತಿಲ್ಲ. ಹೀಗಾಗಿ ಮರಗಳನ್ನು ತೆರವು ಮಾಡುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂಬುದಾಗಿ ತಿಳಿಸಿ ಮನವಿಯನ್ನು ತಿರಸ್ಕರಿಸಿದ್ದರು. ಮರಗಿಡಗಳಿವೆ ಎಂಬ ಕಾರಣದಿಂದ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ನೀಡಲು ಗೃಹ ರಕ್ಷಕ ದಳ ನಿರಾಕರಿಸಿತ್ತು. ಮರಗಳಿಂದ ಯಾವುದೇ ಆಸ್ತಿಗೂ ಹಾನಿಯಾಗಿಲ್ಲ ಎಂಬ ಕಾರಣ ನೀಡಿ ಮರ ತೆರವು ಮಾಡುವುದಕ್ಕೆ ಅರಣ್ಯ ಇಲಾಖೆ ನಿರಾಕರಿಸಿತ್ತು. ಇದರಿಂದ ಅರ್ಜಿದಾರ ಸಂಘಟನೆ ಗೊಂದಲಕ್ಕೀಡಾಕಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಲ್ಲದೆ, ಅರ್ಜಿದಾರರ ಸಂಘದಿಂದ ಅಗ್ನಿ ಸುರಕ್ಷತೆ ಪ್ರಮಾಣ ಪತ್ರ ಪಡೆದುಕೊಳ್ಳುವುದಕ್ಕಾಗಿ ಅಡ್ಡಿಯಿರುವ 49 ಮರಗಳನ್ನು ತೆರವು ಮಾಡಿದಲ್ಲಿ ಅಷ್ಟೇ ಸಂಖ್ಯೆಯ ಮರಗಳನ್ನು ನೆಡಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ಮರಗಳನ್ನು ಕಡಿಯಲು ಅನುಮತಿ ನೀಡಿ ಆದೇಶಿಸಿದೆ.
ಇದನ್ನೂ ಓದಿ: ಬಿದ್ದವರಿಗೆ ಡಿಸಿಎಂ ಹುದ್ದೆ ನೀಡಿದ್ರು, ಆದರೂ ಬಿಜೆಪಿಗೆ ನಿಷ್ಠೆ ತೋರಲಿಲ್ಲ: ರಮೇಶ್ ಜಾರಕಿಹೊಳಿ