ಬೆಂಗಳೂರು:ಬಡವರು, ಶ್ರಮಿಕರಿಗೆ ಬೆಲೆ ಕೊಡುವ ದೇಶ ನಮ್ಮದು. ಇಲ್ಲಿ ಕಾರ್ಮಿಕರು, ಶ್ರಮಿಕರು ಹೆಚ್ಚಾಗಿದ್ದು, ಎಲ್ಲರೂ ದೇಶದ ಏಳ್ಗೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಮೋದಿ ಮಾತ್ರ ಶ್ರೀಮಂತರ ಪರವಾಗಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಪ್ರಧಾನಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಬೆಂಗಳೂರು-ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಅನಿಲ್ ಅಂಬಾನಿ ಜೇಬಿಗೆ 30 (ರಫೆಲ್ ಗುತ್ತಿಗೆ).15 ಉದ್ಯಮಿಗಳ3.5 ಲಕ್ಷ ಕೋಟಿ ಸಾಲವನ್ನು ಸಾಲ ಮನ್ನಾ ಮಾಡಿದ್ದಾರೆ. ಆದರೆ ಬಡವರ ಸಾಲ ಮನ್ನಾ ಮಾಡಲು ಹಣ ಎಲ್ಲಿಂದ ತರುವುದು ಎಂದು ಕೇಳುತ್ತಾರೆ. ನಾವು ಕರ್ನಾಟಕ, ಮಧ್ಯಪ್ರದೇಶ, ಛತ್ತೀಸಘಡ, ಪಂಜಾಬ್ ನಲ್ಲಿ ಸಾಲ ಮನ್ನಾ ಮಾಡಿದ್ದೇವೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಡೈರಿಯಲ್ಲಿ ಬರೆದಿಟ್ಟ ಹಣ ಎಲ್ಲಿಯದು. ರಾಷ್ಟ್ರೀಯ ನಾಯಕರಿಗೆ ನೀಡಿದ ಹಣ ರಾಜ್ಯದ ಸಾಮಾನ್ಯ ಜನರ ಜೇಬಿಂದ ಬಂದಿದ್ದು. ಶ್ರೀಮಂತರಿಗೆ ಅವರು ಹಣ ನೀಡಿದರೆ, ನಮ್ಮ ಸರ್ಕಾರ ಆಡಳಿತಕ್ಕೆ ಬಂದ 6ತಿಂಗಳಲ್ಲಿ ಬಡವರಿಗೆ ನಾವು ಹಣ ನೀಡುತ್ತೇವೆ ಎಂದು ಭರವಸೆ ನೀಡಿದರು.
ನ್ಯಾಯ ಯೋಜನೆ
ಬಡವರಿಗಾಗಿ ನ್ಯಾಯ ಯೋಜನೆ ತಂದಿದ್ದೇನೆ. 15 ಲಕ್ಷ ರೂ. ಜನರಿಗೆ ನೀಡುತ್ತೇನೆ ಎಂದಿದ್ದರು. ಕೊಟ್ಟರಾ?. ಭಾರತೀಯರ ಖಾತೆಗೆ 15 ಲಕ್ಷ ರೂಪಾಯಿ ಕೊಡಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಶೇ. 20 ರಷ್ಷು ಬಡವರ ಖಾತೆಗೆ 72 ಸಾವಿರ ರೂ. ನಂತೆ 3.5 ಲಕ್ಷ ರೂ. ಐದು ವರ್ಷಗಳಲ್ಲಿ ಸಿಗಲಿದೆ. 25 ಕೋಟಿ ಜನ ಇದರ ಲಾಭ ಪಡೆಯಬಹುದು. ಅಲ್ಲದೆ ಯುಪಿಎ ಅಧಿಕಾರಕ್ಕೆ ಬಂದರೆ ಬಡತನದ ವಿರುದ್ಧ ನಮ್ಮ ಸರ್ಜಿಕಲ್ ಸ್ಟ್ರೈಕ್ ನಡೆಯಲಿದೆ ಎಂದರು.
ಅಲ್ಲದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸರಳ ಜಿಎಸ್ಟಿ, ಉದ್ದಿಮೆದಾರರಿಗೆ ಮೊದಲ ಮೂರು ವರ್ಷ ಯಾವುದೇ ಪರವಾನಗಿ ಅಗತ್ಯವಿರಲ್ಲ. ತೆರಿಗೆ ಇರಲ್ಲ. ಬ್ಯಾಂಕ್ ಸಾಲ ಸಿಗುವಂತೆ ಮಾಡುತ್ತೇವೆ. ಮೋದಿ ಸುಳ್ಳು ಆಶ್ವಾಸನೆ ನೀಡಿ ದೇಶ ಒಡೆಯುತ್ತಿದ್ದಾರೆ. ನಾವು ಜೋಡಿಸುವ ಕಾರ್ಯ ಮಾಡಲಿದ್ದೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.
ಜೆಡಿಎಸ್ ನಾಯಕರು, ಕಾರ್ಯಕರ್ತರಲ್ಲಿ ಮನವಿ ಮಾಡುತ್ತಿದ್ದು, ಮೋದಿ ಸೋಲಿಸಲು ನಮ್ಮ ಜೊತೆ ಕೈಜೋಡಿಸಿ. ಇಲ್ಲಿನ ಮೈತ್ರಿ ಆಧಾರದ ಮೇಲೆ ದಿಲ್ಲಿಯಲ್ಲೂ ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು. ನಮ್ಮವರನ್ನು ಗೆಲ್ಲಿಸಲು ಕೈಜೋಡಿಸಿ ಎಂದು ರಾಹುಲ್ ಮನವಿ ಮಾಡಿದರು.
ಲೂಟಿಕೋರರಿಗೆ ಸಹಾಯ ಮಾಡುವ ಚೌಕಿದಾರ್ ಮೋದಿ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ದೇಶದ ಆಡಳಿತ ಬೇಸರ ತಂದಿದೆ. ಮೋದಿ ಸರ್ಕಾರ ಎಲ್ಲರ ವಿರೋಧಿ. ಲೂಟಿಕೋರರಿಗೆ ಸಹಾಯ ಮಾಡುವ ಚೌಕಿದಾರ್ ಮೋದಿ. ಜೆಡಿಎಸ್ ಹಾಗೂ ಕಾಂಗ್ರೆಸ್ ಒಮ್ಮತದ ಅಭ್ಯರ್ಥಿಗೆ ಬೆಂಬಲ ನೀಡಬೇಕು. ಇಲ್ಲಿ ತಾರತಮ್ಯ ಬೇಡ. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು ಎಂದು ಗುಡುಗಿದರು.
ಭಿನ್ನಾಭಿಪ್ರಾಯ ಬದಿಗಿಡಿ
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮೋದಿ ಪ್ರಧಾನಿಯಾಗಲು ಸಾಕಷ್ಟು ಕುಟಿಲತೆ ಮಾಡುತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಸರಣಿ ಆತ್ಮಹತ್ಯೆ ನಡೆಯುತ್ತಿವೆ. ಯುವಕರಿಗೆ ಉದ್ಯೋಗವಿಲ್ಲ. ಸ್ವಾತಂತ್ರ್ಯ, ಶಾಂತಿ, ನೆಮ್ಮದಿ, ಪ್ರಜಾಪ್ರಭುತ್ವ ಶಕ್ತಿ ಇರುವ ಸರ್ಕಾರವನ್ನು ಅಧಿಕಾರಕ್ಕೆ ತರಿಸಲು ಎಲ್ಲರೂ ಸಂಕಲ್ಪ ತೊಡಬೇಕು ಎಂದು ಕರೆ ನೀಡಿದರು.
ಜನರ ಹಿತ ಕಾಪಾಡಿಲ್ಲ
ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಗೆ ನಾಯಕತ್ವದ ಅವಕಾಶ ನೀಡುವ ಅಗತ್ಯವಿದೆ. ಅವರಿಗೆ ಎಲ್ಲಾ ಪ್ರಾದೇಶಿಕ ಪಕ್ಷಗಳು ಬಲ ತುಂಬಬೇಕು. ನರೇಂದ್ರ ಮೋದಿ ಮಹಾನ್ ಸುಳ್ಳುಗಾರ. 45 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದೇವೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಸಾಲಮನ್ನಾ ಮಾತ್ರವಲ್ಲ, ಸುರಕ್ಷಿತವಾಗಿ ಬದುಕುವ ಕೃಷಿ ನೀತಿ ತರಲಿದ್ದೇವೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಹೆಸರಿನಲ್ಲಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
17 ಕುಟುಂಬಗಳನ್ನು ಮಾತ್ರ ರಾಜ್ಯದಲ್ಲಿ ಗುರುತಿಸಿ ಕೇವಲ 6 ಕುಟುಂಬಕ್ಕೆ ಮಾತ್ರ 2 ಸಾವಿ ರೂ. ಸಂದಾಯ ಮಾಡಿದ್ದಾರೆ. 4.5 ಟ್ರಿಲಿಯನ್ ಕೋಟಿ ಸಾಲದಲ್ಲಿ ಕೇಂದ್ರ ಸರ್ಕಾರ ನಡೆಯುತ್ತಿದೆ. ಮಹದಾಯಿ ನೀರಿನ ಗೆಜೆಟ್ ನೋಟಿಫಿಕೇಷನ್ ಮಾಡಿಲ್ಲ. ಬೆಂಗಳೂರು ನಗರಕ್ಕೆ ಸುಮಾರು 100 ಕೋಟಿ ಮೊತ್ತದ ಕಾರ್ಯಕ್ರಮವನ್ನು ಮೈತ್ರಿ ಸರ್ಕಾರ ನೀಡಿದೆ. ಬಿಜೆಪಿಗೆ ಯಾರೂ ಬೆಂಬಲ ನೀಡಬೇಡಿ. ನರೇಂದ್ರ ಮೋದಿ ವ್ಯಾಮೋಹ ಬಿಡಿ ಎಂದು ಯುವಕರಿಗೆ ಎಂದು ಹೆಚ್ಡಿಕೆ ಮನವಿ ಮಾಡಿದರು.
ನನಗೆ ಒಂದು ಆಸೆ ಇದೆ
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮಾತನಾಡಿ, ನನಗೆ ಒಂದು ಆಸೆ ಇದೆ. 21 ಪ್ರಾದೇಶಿಕ ಪಕ್ಷಗಳ ಮಹಾಘಟಬಂಧನ್ ರಾಜ್ಯದಲ್ಲಿ ಆದಾಗ ಅದನ್ನು ಪ್ರಧಾನಿ ಸಹಿಸದೇ ಎಲ್ಲವನ್ನೂ ತಾನೇ ಮಾಡಿದ್ದೇನೆ ಎಂದರು. ಈಗ ರಾಹುಲ್ ನೇತೃತ್ವದಲ್ಲಿ ಹೊಸ ಸರ್ಕಾರ ಬರಬೇಕೆಂದು ಬಯಸುತ್ತೇನೆ. ಮೋದಿ ಏನು ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಆದ್ದರಿಂದ ಯುಪಿಎ ಬೆಂಬಲಿಸೋಣ. ಇಂದು ರಾಹುಲ್ ನಾಯಕತ್ವದಲ್ಲಿ ಕರ್ನಾಟಕ ಮೂಲಕ ಮೈತ್ರಿ ಸರ್ಕಾರ ಹೇಗೆ ನಡೆಯಲಿದೆ ಎಂಬ ಸಂದೇಶ ನೀಡಬೇಕು ಎಂದರು.
ಸಮಾರಂಭದಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಡಿಸಿಎಂ ಪರಮೇಶ್ವರ್, ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಕೆ. ಹೆಚ್. ಮುನಿಯಪ್ಪ, ಸಚಿವ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ. ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.