ಬೆಂಗಳೂರು: ಅತೃಪ್ತ ಶಾಸಕರು ಪಕ್ಷಕ್ಕೆ ಬಂದರೆ ತಮ್ಮ ಕಥೆ ಏನು? ಕ್ಷೇತ್ರ ಕಳೆದುಕೊಂಡರೆ ರಾಜಕೀಯ ಭವಿಷ್ಯವೇ ಮುಗಿದು ಹೋಗಲಿದೆಯಾ ಎಂಬ ಆತಂಕಕ್ಕೆ ಬಿಜೆಪಿ ಪರಾಜಿತ ಅಭ್ಯರ್ಥಿಗಳು ಸಿಲುಕಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯ ಕಸರತ್ತು ನಡೆಸುತ್ತಿರುವ ನಡುವೆ ಬಿಜೆಪಿ ಪರಾಜಿತ ಶಾಸಕರು ಕ್ಷೇತ್ರ ಕಳೆದುಕೊಳ್ಳುವ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ. ರಾಜೀನಾಮೆ ನೀಡಿ ಮುಂಬೈ ರೆಸಾರ್ಟ್ ಸೇರಿರುವ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಆ ಎಲ್ಲಾ ಕ್ಷೇತ್ರಗಳಿಂದ ಹಿಂದೆ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದ ಕೇಸರಿ ನಾಯಕರಲ್ಲಿ ಅತಂತ್ರರಾಗುವ ಆತಂಕ ತಲೆದೋರಿದೆ.
ಉಪ ಚುನಾವಣೆ ನಡೆದಲ್ಲಿ ಅತೃಪ್ತರಿಗೆ ಬಿಜೆಪಿ ಟಿಕೆಟ್ ಖಚಿತವಾಗಿರುವ ಹಿನ್ನೆಲೆಯಲ್ಲಿ ರಾಜಕೀಯವಾಗಿ ಮೂಲೆಗುಂಪಾಗುವ ಭೀತಿಗೆ ಸಿಲುಕಿರುವ ಪರಾಜಿತ ಅಭ್ಯರ್ಥಿಗಳು ಇದೀಗ ನಮ್ಮನ್ನು ಕಡೆಗಣಿಸಬೇಡಿ ಎಂದು ಮನವಿ ಮಾಡಲು ಸಿದ್ದತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅತೃಪ್ತರಿಗೆ ಟಿಕೆಟ್ ಕೊಟ್ಟರೆ ನಮ್ಮ ಗತಿಯೇನು ಎಂದು ಯಡಿಯೂರಪ್ಪ ಅವರನ್ನು ನೇರವಾಗಿ ಕೇಳುವ ಧೈರ್ಯವಿಲ್ಲ. ಹಾಗಂತ ಸುಮ್ಮನೆ ಇದ್ದರೆ ಕ್ಷೇತ್ರ ಕೈ ತಪ್ಪಲಿದೆ. ಒಂದು ರೀತಿಯಲ್ಲಿ ಬಾಯಲ್ಲಿ ಬಿಸಿ ತುಪ್ಪ ಇಟ್ಟಂತಾಗಿದೆ. ಆದರೂ ಯಡಿಯೂರಪ್ಪ ಅವರ ಆಪ್ತ ವಲಯದ ನಾಯಕರ ಮೂಲಕ ತಮ್ಮ ಆತಂಕವನ್ನು ತಲುಪಿಸುವ ಪ್ರಯತ್ನ ಮಾಡಲು ಪರಾಜಿತ ಅಭ್ಯರ್ಥಿಗಳ ನಿರ್ಧರಿಸಿದ್ದಾರೆ ಎನ್ನಲಾಗಿದೆ.