ಬೆಂಗಳೂರು: ಲಂಚ ಪಡೆದ ಗಂಭೀರ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಐಎಎಸ್ ಅಧಿಕಾರಿ ಜೆ ಮಂಜುನಾಥ್ ಅವರನ್ನು ಮತ್ತೆ ಸರ್ಕಾರ ಸೇವೆಗೆ ಮರುನೇಮಿಸಿದೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ. ಮಂಜುನಾಥ್ರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪದನಿಮಿತ್ತ ಜಂಟಿ ಕಾರ್ಯದರ್ಶಿ ಹಾಗೂ ವಿಶೇಷ ಅಧಿಕಾರಿಯಾಗಿ ಮರುನೇಮಿಸಲಾಗಿದೆ.
ಭೂ ವ್ಯಾಜ್ಯ ಇತ್ಯರ್ಥ ಸಂಬಂಧ ಲಂಚ ಪಡೆದ ಆರೋಪದಡಿ ಅಂದು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಇವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬಂಧಿಸಿದ್ದರು. ರಾಜ್ಯ ಸರ್ಕಾರ ಸೇವೆಯಿಂದ ಅಮಾನತುಗೊಳಿಸಿತ್ತು. ಇದೀಗ ಮತ್ತೆ ಸೇವೆಗೆ ಮರು ನೇಮಕ ಮಾಡಿರುವುದು ಹುಬ್ಬೇರಿಸುವಂತೆ ಮಾಡಿದೆ.
2021ರ ಮೇ ತಿಂಗಳಿನಲ್ಲಿ ಎಸಿಬಿಯು ಉಪತಹಶೀಲ್ದಾರ್ ಮಹೇಶ್ ಪಿಎಸ್ ಮತ್ತು ಗುತ್ತಿಗೆ ನೌಕರ ಚೇತನ್ ಎಂಬವರನ್ನು ಬಂಧಿಸಿತ್ತು. ಬಂಧಿತ ಇಬ್ಬರು ಬೆಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಿಂದ ಅನುಕೂಲರ ಆದೇಶ ಪಡೆಯಲು 5 ಲಕ್ಷ ರೂಪಾಯಿ ಹಣ ಪಡೆಯುತ್ತಿರುವ ಸಂದರ್ಭದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಜಿಲ್ಲಾಧಿಕಾರಿಗಳನ್ನು ಯಾಕೆ ವಿಚಾರಣೆಗೆ ಒಳಪಡಿಸಿಲ್ಲ ಎಂದು ಎಸಿಬಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಹೈಕೋರ್ಟ್ ತರಾಟೆಯ ಬಳಿಕ ಜೆ.ಮಂಜುನಾಥ್ ಅವರನ್ನು ಎಸಿಬಿ ಬಂಧಿಸಿತ್ತು.
ಇದನ್ನೂ ಓದಿ: ಲಂಚ ಪ್ರಕರಣ: ಐಎಎಸ್ ಅಧಿಕಾರಿ ಜೆ.ಮಂಜುನಾಥ್ಗೆ ಷರತ್ತುಬದ್ಧ ಜಾಮೀನು