ಬೆಂಗಳೂರು: ಪಕ್ಷದ ಕಾರ್ಯಾಲಯದಲ್ಲಿ ಅಡುಗೆ ಮಾಡುವುದು, ದೂರವಾಣಿ ಕರೆ ಸ್ವೀಕಾರ ಮಾಡುವುದು ಸೇರಿದಂತೆ ಎಲ್ಲ ಕೆಲಸ ಮಾಡಿದ್ದೇನೆ. ನಾವೆಲ್ಲಾ ಕೆಲಸ ಮಾಡಿದ್ದರಿಂದಾಗಿ ಪಕ್ಷ ಇಂದು ಈ ಮಟ್ಟಕ್ಕೆ ಬೆಳೆದಿದೆ ಎಂದು ತೇಜಸ್ವಿನಿ ಅನಂತಕುಮಾರ್ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ತೇಜಸ್ವಿನಿ ಅನಂತಕುಮಾರ್ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ತೇಜಸ್ವಿಸೂರ್ಯ ಹಾಗೂ ಶಾಸಕ ರವಿಸುಬ್ರಮಣ್ಯ ಭೇಟಿ ನೀಡಿದರು. ತೇಜಸ್ವಿನಿ ಅವರನ್ನು ಸಮಾಧಾನಪಡಿಸುವ ಯತ್ನ ನಡೆಸಿದರು. ನಂತರ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೂಡ ಆಗಮಿಸಿದರು. ತೇಜಸ್ವಿ ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದರು.
ಈ ವೇಳೆ ಅನಂತಕುಮಾರ್ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತೇಜಸ್ವಿನಿ ಪರ ಘೋಷಣೆ ಕೂಗಿದರು. ಸೀಟು ಬಿಟ್ಟುಕೊಡುವಂತೆ ತೇಜಸ್ವಿ ಸೂರ್ಯರನ್ನು ಅನಂತಕುಮಾರ್ ಅಭಿಮಾನಿಗಳು ಕಾರ್ಯಕರ್ತರು ಒತ್ತಾಯಿಸಿದರು. ಅನಂತಕುಮಾರ್ ಪರ ಘೋಷಣೆಗಳನ್ನು ಕೂಗಿದರು.ಕಾರ್ಯಕರ್ತರನ್ನು ಸಮಾಧಾನ ಪಡಿಸಲು ತೇಜಸ್ವಿನಿ ಯತ್ನಿಸಿದರೂ ಕೂಡ ಒಪ್ಪದೆ ಧರಣಿ ನಡೆಸಿದರು. ನಂತರ ಕಾರ್ಯಕರ್ತರು ತಮ್ಮ ನೋವು ಹೇಳಿಕೊಂಡಿದ್ದಾರೆ. ಆದರೆ, ದೇಶ ಮೊದಲು ಎಂಬುದು ನಮ್ಮ ಸಿದ್ಧಾಂತ. ಪ್ರಚಾರಕ್ಕೆ ಹೋಗೋಣ ಎಂದು ಕಾರ್ಯಕರ್ತರನ್ನು ಸಮಾಧಾನಪಡಿಸಿದರು.
ಬಳಿಕ ಅಭ್ಯರ್ಥಿ ಹಾಗೂ ನಾಯಕರ ಮುಂದೆ ಮಾತನಾಡಿದ ತೇಜಸ್ವಿನಿ, ನಾವು ಸಿದ್ಧಾಂತದ ಮೇಲೆ ಇರುವಂತಹವರು, ಸಿದ್ದಾಂತ, ಕಾರ್ಯಕರ್ತರು ಮತ್ತು ಕಾರ್ಯಾಲಯ ನಮ್ಮ ತತ್ವ, ಎಲ್ಲರೂ ಸಿದ್ಧಾಂತಕ್ಕೆ ಬದ್ಧ. ಪಕ್ಷದ ನಿರ್ಣಯಕ್ಕೆ ನಾವು ಸದಾ ಬದ್ಧರಿದ್ದೇವೆ. ಕಾರ್ಯಕರ್ತರು ಅವರ ದುಃಖ ಅವರು ಹೇಳಿಕೊಳ್ಳುತ್ತಾರೆ ಎಂದು ಬೆಂಬಲಿಗರ ಪ್ರತಿಭಟನೆಯನ್ನು ಸಮರ್ಥಿಸಿಕೊಂಡರು.
ನಮ್ಮ ಕಾರ್ಯಕರ್ತರು 25-30 ವರ್ಷ ಕೆಲಸ ಮಾಡಿದ್ದಾರೆ. ನಾನೂ ಕೂಡ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ನಾನು ಮದುವೆಯಾದಾಗ ಪಕ್ಷಕ್ಕೆ ಕಾರ್ಯಾಲಯವೇ ಇರಲಿಲ್ಲ. ಕಾರ್ಯಾಲಯದಲ್ಲಿ ಅಡಿಗೆ ಮಾಡಿಕೊಂಡು, ಫೋನ್ ಎತ್ತುವುದು ಸೇರಿ ಎಲ್ಲವನ್ನೂ ಮಾಡಿದ್ದೇನೆ. ನಾವೆಲ್ಲಾ ಕೆಲಸ ಮಾಡಿದ್ದರಿಂದ ಪಕ್ಷ ಇವತ್ತು ಈ ಮಟ್ಟಕ್ಕೆ ಬಂದಿದೆ. ಪಕ್ಷದ ಸಿದ್ದಾಂತಕ್ಕೆ ಕಾರ್ಯಕರ್ತರೂ ಬದ್ದರಾಗಿರಬೇಕು, ನಾಯಕರೂ ಬದ್ಧರಾಗಿರಬೇಕು. ನಾಯಕರಾಗಬೇಕೆಂಬವರಿಗೂ ಇದು ಒಂದು ಸಂದೇಶ ಎಂದು ಅಭ್ಯರ್ಥಿ ತೇಜಸ್ವಿಸೂರ್ಯಗೂ ಬಿಸಿ ಮುಟ್ಟಿಸಿದರು.
ನಮ್ಮ ಕಾರ್ಯಕರ್ತರು ತಮ್ಮ ವರ್ತನೆ ಮೂಲಕ ಇದನ್ನೇ ಹೇಳುತ್ತಿದ್ದಾರೆ. ನಾವು ದೇಶದ ಪರ, ಮೋದಿ ಪರವಾಗಿದ್ದೇವೆ. ಪಕ್ಷದ ತತ್ವ ಸಿದ್ದಾಂತದಂತೆ ನಡೆಯುತ್ತೇವೆ, ಪಕ್ಷದ ಸೂಚನೆಯನ್ನು ಪಾಲಿಸುತ್ತೇವೆ ಎಂದರು.
ರಾಜೀವ್ ಚಂದ್ರಶೇಖರ್ ಕಾರಿಗೆ ಮುತ್ತಿಗೆ:
ತೇಜಸ್ವಿನಿ ಜೊತೆ ಮಾತುಕತೆ ನಡೆಸಿದ ನಂತದ ಹಿಂದಿರುಗಲು ಮುಂದಾದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ಗೆ, ಬೆಂಬಲಿಗರು ಮುತ್ತಿಗೆ ಹಾಕಿದರು. ರಾಜೀವ್ ಚಂದ್ರಶೇಖರ್ ಹೊರಡುತ್ತಿದ್ದಂತೆ ಅಟ್ಟಿಸಿಕೊಂಡು ಹೋಗಿ ಮಹಿಳೆಯರು ಕಾರಿಗೆ ಅಡ್ಡ ನಿಂತರು. ನಂತರ ಮಹಿಳೆಯರನ್ನು ಚದುರಿಸಿದ ಪೊಲೀಸರು ಕಾರಿಗೆ ದಾರಿ ಮಾಡಿಕೊಟ್ಟರು.