ಬೆಂಗಳೂರು : ಕೊನೆ ಉಸಿರು ಇರುವವರೆಗೂ ಈ ಪ್ರಾದೇಶಿಕ ಪಕ್ಷಕ್ಕಾಗಿ (ಜೆಡಿಎಸ್) ನಾನು ಹೋರಾಟ ಮಾಡುತ್ತೇನೆ. ಮತ್ತೊಮ್ಮೆ ಬಿಜೆಪಿ ಪಕ್ಷ ತಲೆ ಎತ್ತ ಬಾರದು. ನಾನು ಸತ್ತರೂ ನನ್ನ ಪಕ್ಷ ಉಳಿಯಬೇಕು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾರ್ಮಿಕವಾಗಿ ನುಡಿದಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ಇಂದು ಆಯೋಜಿಸಿದ್ದ ಯುವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಗೌಡರು, ನನ್ನ ಕಾಲ ಮುಗಿತಾ ಬಂತು. ಇನ್ನು ಮುಂದೆ ಮುಂದಿನ ಪೀಳಿಗೆ ಜವಾಬ್ದಾರಿ. ಒಂದು ತಿಂಗಳಲ್ಲಿ ಪಕ್ಷದಲ್ಲಿರುವ ಎಲ್ಲ ಘಟಕಗಳನ್ನು ಅಸ್ತಿತ್ವಕ್ಕೆ ತರುತ್ತೇನೆ ಎಂದರು.
ನಾನು ಕುಟುಂಬ ರಾಜಕಾರಣ ಮಾಡಿಲ್ಲ. ಪ್ರಾದೇಶಿಕ ಪಕ್ಷ ಉಳಿಸುವುದಕ್ಕಾಗಿ ಏಳು ಬೀಳು ಎಲ್ಲಾ ನೋಡಿದ್ದೇನೆ. ಈ ಬಾರೀ ಚುನಾವಣೆಯಲ್ಲಿ ಎಲ್ಲಾ ನೋಡಿದ್ದೇನೆ. ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಕುಟುಂಬದ ವಿರುದ್ಧ ಪ್ರಚಾರ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜ್ವಲ್ಗೆ ಹಾಗೂ ಹಾಸನದ ಮುಖಂಡರಿಗೆ ಮೂರು ವರ್ಷದ ಹಿಂದೆಯೇ ಹೇಳಿದ್ದೆ. ನಾನು ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ. ನನಗೆ ಈಗಾಗಲೇ 87 ವರ್ಷ. ಮುಂದಿನ ಚುನಾವಣೆ ವೇಳೆಗೆ 92 ವರ್ಷ ಆಗಿರುತ್ತದೆ. ನಾನು ಮುಂದಿನ ಚುನಾವಣೆಗೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದ ದೇವೇಗೌಡರು, ನಿಖಿಲ್ ನಟನಾಗಿ ಒಳ್ಳೆ ಹೆಸರು ಮಾಡಿದ್ದ. ಆದರೆ, ಅವನು ರಾಜಕೀಯಕ್ಕೆ ಬರುತ್ತಾನೆಂದು ಕನಸಲ್ಲೂ ಯೋಚಿಸಿರಲಿಲ್ಲ ಎಂದು ಹೇಳಿದರು.
ಪಕ್ಷ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಕಾರ್ಯಕರ್ತರ ಮಾತನ್ನು ಗಮನಿಸಿದ್ದೇನೆ. ನನ್ನ ಪಾಲಿಗೆ ದೆಹಲಿಗೆ ಹೋಗುವ ಅವಕಾಶ ಈಗಿಲ್ಲ. ಪಕ್ಷದ ಕಚೇರಿಯಲ್ಲಿಯೇ ಇರುತ್ತೇನೆ ಎಂದರು.
ಮೈತ್ರಿ ಸರ್ಕಾರಕ್ಕೆ ಧಕ್ಕೆ ಆಗಬಾರದು :
ಪಕ್ಷದ ಸಂಘಟನೆಗಾಗಿ ನಡೆಸುತ್ತಿರುವ ಈ ಪಾದಯಾತ್ರೆ ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರಕ್ಕೆ ಅಪಾಯ ಆಗಬಾರದು. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಪರಸ್ಪರ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಅದಕ್ಕೆ ಯಾವುದೇ ರೀತಿಯ ಅಪಾಯ ಆಗದ ರೀತಿಯಲ್ಲಿ ಪಾದಯಾತ್ರೆ ಮಾಡಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ನನ್ನ ಅನುಭವ ಪ್ರಾದೇಶಿಕ ಪಕ್ಷಗಳು ಇಲ್ಲದೇ ಇದ್ದರೆ ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಬಹಳ ಉದಾಸೀನವಾಗಿ ಕಾಣುತ್ತಿದ್ದವು. ತಮಿಳುನಾಡಿನಲ್ಲಿ ಕರುಣಾನಿಧಿಯವರು ವೀಲ್ ಚೇರ್ನಲ್ಲೇ ಕುಳಿತು ತಮ್ಮ ಪಕ್ಷ ಸಂಘಟಿಸಿ ಸರ್ಕಾರ ರಚನೆ ಮಾಡಿದ್ದನ್ನು ಸ್ಮರಿಸಿಕೊಂಡ ಗೌಡರು, ರಾಜ್ಯದಲ್ಲೂ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಂತೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ. ದತ್ತ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಪ್ರಕಾಶ್ ಮತ್ತಿತರ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.