ಬೆಂಗಳೂರು : ನಾನು ಬೆಳಗ್ಗೆಯಿಂದ ನಾನಾ ಸಭೆಗಳಲ್ಲಿ ಭಾಗಿಯಾಗಿದ್ದೆ. ಸಚಿವ ಆನಂದ್ ಸಿಂಗ್ ಜತೆ ಭೇಟಿಗೆ ಸಾಧ್ಯವಾಗಲಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇನ್ಮೇಲೆ ಆನಂದ್ ಸಿಂಗ್ ಜತೆ ಮಾತಾಡ್ತೇನೆ.
ಅವರು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ ಎಂಬ ಮಾಹಿತಿಯೂ ಇದೆ. ಬಿಎಸ್ವೈ ಹಾಗೂ ಆನಂದ್ ಸಿಂಗ್ ಇಬ್ಬರ ಜತೆಗೂ ಮಾತನಾಡಿ ಮಾಹಿತಿ ಪಡೆಯುತ್ತೇನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಜತೆ ಆನಂದ್ ಸಿಂಗ್ ಏನು ಮಾತುಕತೆ ನಡೆಸಿದ್ದಾರೆ ಎಂಬ ಬಗ್ಗೆ ಗೊತ್ತಿಲ್ಲ. ಯಡಿಯೂರಪ್ಪ ಜತೆಗೂ ಚರ್ಚೆ ಮಾಡ್ತೇನೆ ಎಂದ ಅವರು, ಇಂಧನ ಇಲಾಖೆ, ನೀರಾವರಿ ಇಲಾಖೆ ಪ್ರಗತಿ ಪರಿಶೀಲನೆ ಮಾಡಿದ್ದೇನೆ. ಇಂಧನ ಇಲಾಖೆಯಲ್ಲಿ ಹೊಸ ಕ್ರಮಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಪವರ್ ಪ್ರೊಡಕ್ಷನ್ಗೆ ಆದ್ಯತೆ ನೀಡಬೇಕು. ಹೊರ ರಾಜ್ಯಗಳಿಗೆ ಪವರ್ ನೀಡುವ ಮಟ್ಟಕ್ಕೆ ಅಭಿವೃದ್ಧಿ ಆಗಬೇಕು.
ಇದರ ಬಗ್ಗೆ ಇಲಾಖೆಗೆ ಸಲಹೆ ಕೊಟ್ಟಿದ್ದೇನೆ. ನೀರಾವರಿ ಇಲಾಖೆಯ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದೇನೆ. ಚಲನಚಿತ್ರ ವಾಣಿಜ್ಯ ಮಂಡಳಿಯವರು ಬಂದಿದ್ರು. ಸಂಪೂರ್ಣ ಆಸನ ಭರ್ತಿಗೆ ಮನವಿ ಮಾಡಿದ್ದಾರೆ. ರಾಜ್ಯದ ಪರಿಸ್ಥಿತಿ ವಿವರಣೆ ನೀಡಿದ್ದೇನೆ.
ಕೊರೊನಾ ನೋಡಿಕೊಂಡು ಓಪನ್ ಮಾಡುವ ಬಗ್ಗೆ ತಿಳಿಸಿದ್ದೇನೆ ಎಂದರು. ಎಂಟಿಬಿ, ಆರ್ ಶಂಕರ್ ಭೇಟಿ ವಿಚಾರವಾಗಿ ಮಾತನಾಡಿ, ಆರ್ ಶಂಕರ್ ಸಹಜವಾಗಿ ಅಸಮಾಧಾನ ಹೊಂದಿದ್ದಾರೆ. ಈ ಬಗ್ಗೆ ಮಾತನಾಡಿದ್ದೇನೆ, ಮುಂದಿನ ದಿನಗಳಲ್ಲಿ ಅವಕಾಶ ಕೊಡುತ್ತೇವೆ ಎಂದರು.
ಕೇಂದ್ರ ಸಚಿವರಿಗೆ ಮಾಹಿತಿ ನೀಡುತ್ತೇನೆ : ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಕೇಳುವ ಬಗ್ಗೆ ಕೇಂದ್ರ ನೀರಾವರಿ ಸಚಿವರ ಹೇಳಿಕೆ ವಿಚಾರದ ಬಗ್ಗೆಯೂ ಇದೇ ವೇಳೆ ಪ್ರತಿಕ್ರಿಯಿಸಿದ ಸಿಎಂ, ಸುಪ್ರೀಂಕೋರ್ಟ್‌ನಿಂದ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿರುವ ಬಗ್ಗೆ ಅವರಿಗೆ ಗೊತ್ತಿರಲಿಲ್ಲ. ಅವರು ಈ ರೀತಿ ಹೇಳಿದ್ಮೇಲೆ ನಾನು ಅವರ ಜೊತೆ ಮಾತಾಡಿದ್ದೇನೆ.
ಅವರು ಕೂಡ ಅದೇನು ಯೋಜನೆ ಡಾಕ್ಯುಮೆಂಟ್ ಇದೆ ಅದನ್ನು ತಗೊಂಡು ಬನ್ನಿ ಎಂದಿದ್ದಾರೆ. ಶೀಘ್ರವೇ ದೆಹಲಿಗೆ ತೆರಳಿ ಕೇಂದ್ರ ನೀರಾವರಿ ಸಚಿವರನ್ನ ಭೇಟಿ ಮಾಡುತ್ತೇನೆ. ಮೇಕೆದಾಟು ಯೋಜನೆ ಕುರಿತು ಅವರಿಗೆ ಮನವರಿಕೆ ಮಾಡಿಕೊಟ್ಟು, ಕಾಮಗಾರಿ ಆರಂಭಿಸಲು ಒಪ್ಪಿಗೆ ಪಡೆಯುತ್ತೇವೆ ಎಂದು ವಿವರಿಸಿದರು.