ಬೆಂಗಳೂರು: ರಾಜ್ಯಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಪಕ್ಷದ ಆಯ್ಕೆಯನ್ನು ಗೌರವುಸುತ್ತೇನೆ. ಎಲ್ಲಾ ರೀತಿಯ ಸಹಕಾರ ಇಬ್ಬರು ಅಭ್ಯರ್ಥಿಗಳಿಗೂ ನೀಡುತ್ತೇನೆ ಎಂದು ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್ಗೆ ಪ್ರಬಲ ಆಕಾಂಕ್ಷಿಯಾಗಿದ್ದ ರಮೇಶ್ ಕತ್ತಿ ಹೇಳಿದ್ದಾರೆ.
ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಇಂದು ರಾಜ್ಯಸಭೆಗೆ ಇಬ್ಬರು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಮುಂಬೈ ಕರ್ನಾಟಕದ ಈರಣ್ಣ ಕಡಾಡಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಅಶೋಕ್ ಗಸ್ತಿ ಹೆಸರನ್ನು ಪ್ರಕಟಿಸಿದೆ. ಇದು ನನಗೆ ಸಂತೋಷ ತಂದಿದೆ ಎಂದಿದ್ದಾರೆ.
ಇಂದಿನ ಟಿಕೆಟ್ ಘೋಷಣೆ ಕೆಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಜವಾಬ್ದಾರಿ ನೀಡುವ ಸಂದೇಶವನ್ನು ಪಕ್ಷ ನೀಡಿರುವುದನ್ನು ತೋರಿಸುತ್ತಿದೆ. ರಾಜ್ಯಸಭೆ ಚುನಾವಣೆಗೆ ನಾನೂ ಕೂಡ ಆಕಾಂಕ್ಷಿ. ಆದರೆ ನನಗೆ ಟಿಕೆಟ್ ಸಿಗದೇ ಇದ್ದರೂ ನಮ್ಮವರನ್ನು ಗುರುತಿಸಿ ಟಿಕೆಟ್ ಕೊಟ್ಟಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಇಬ್ಬರು ಅಭ್ಯರ್ಥಿಗಳಿಗೂ ನಮ್ಮ ಕಡೆಯಿಂದ ಬೆಂಬಲವಿದೆ. ಭವಿಷ್ಯದಲ್ಲಿ ರಾಜ್ಯದ ಸಮಸ್ಯೆ ಅರ್ಥ ಮಾಡಿಕೊಂಡು ಕೆಲಸ ಮಾಡಲಿ. ಆ ಶಕ್ತಿಯನ್ನು ದೇವರು ಕರುಣಿಸಿ ಒಳ್ಳೆಯದು ಮಾಡಲಿ ಎಂದು ವಿಡಿಯೋ ಸಂದೇಶದ ಮೂಲಕ ರಮೇಶ್ ಕತ್ತಿ ಪ್ರತಿಕ್ರಿಯೆ ನೀಡಿದ್ದಾರೆ.