ಬೆಂಗಳೂರು: ಹೆಚ್.ಡಿ ಕುಮಾರಸ್ವಾಾಮಿಯವರು ಸಿಎಂ ಆಗಿದ್ದಾಗಲೇ ಐಎಂಎ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿದ್ದೆ. ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿರುವುದು ಸ್ವಾಗತಾರ್ಹ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಸೋಮವಾರ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರನ್ನು ಭೇಟಿಯಾಗಿದ್ದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಖಾಸಗಿ ವಿಚಾರವಾಗಿ ಪೊಲೀಸ್ ಆಯುಕ್ತರನ್ನು ಭೇಟಿಯಾಗಿದ್ದೇನೆ. ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.
ಇನ್ನು ಇದುವರೆಗೂ ತಮಗೆ ಸಿಬಿಐನಿಂದ ಯಾವುದೇ ನೋಟಿಸ್ ಬಂದಿಲ್ಲ. ಬಿಜೆಪಿಯವರು ಭಯ ಬೀಳುವವರಿಗೆ ಮಾತ್ರ ಭಯಪಡಿಸುತ್ತಾರೆ. ತಾವು ಭಯಪಡುವುದಿಲ್ಲ, ಭಯಪಡಿಸುವುದೂ ಇಲ್ಲ ಎಂದು ಹೇಳಿದರು.
ಸಚಿವ ಕೆ.ಎಸ್ .ಈಶ್ವರಪ್ಪನವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಜಮೀರ್, ಈಶ್ವರಪ್ಪ ಅವರ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ. ಅವರದ್ದು ಎಲುಬಿಲ್ಲದ ನಾಲಿಗೆ ಎಂದು ಈ ಹಿಂದೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಚುನಾವಣೆ ವೇಳೆ ಈಶ್ವರಪ್ಪ ಕಳ್ಳರಂತೆ ರಾತ್ರಿ ವೇಳೆ ಮುಸ್ಲಿಮರ ಮತ ಕೇಳಿರುವ ವಿಡಿಯೋ ತುಣುಕುಗಳು ತಮ್ಮ ಬಳಿ ಇವೆ ಎಂದು ಹೇಳಿದರು.