ಬೆಂಗಳೂರು: ಸಂಪುಟ ವಿಸ್ತರಣೆಗೆ ಬಿಎಸ್ವೈಗೆ ಗ್ರೀನ್ ಸಿಗ್ನಲ್ ಸಿಕ್ಕ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಂತ್ರಿ ಸ್ಥಾನ ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಭೈರತಿ ಬಸವರಾಜು ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.
ಭೈರತಿ ಬಸವರಾಜು ಮನೆಯತ್ತ ಕಾರ್ಯಕರ್ತರು ಮತ್ತು ಮುಖಂಡರ ದಂಡೇ ಬರುತ್ತಿದ್ದು, ಭೈರತಿ ಬಸವರಾಜುಗೆ ಅಭಿನಂದಿಸಲಿದ್ದಾರೆ. ಸಾವಿರಾರು ಕಾರ್ಯಕರ್ತರು ಬರುವ ಹಿನ್ನೆಲೆಯಲ್ಲಿ ಮನೆಯ ಮುಂದೆ ಶಾಮಿಯಾನ ಹಾಕಿಸುತ್ತಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಶಾಸಕ ಭೈರತಿ ಬಸವರಾಜು, ನಗರಾಭಿವೃದ್ಧಿ ಖಾತೆಗೆ ಮನವಿ ಮಾಡಿದ್ದೇನೆ. ಖಾತೆ ನೀಡೋದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ನನ್ನ ಕ್ಷೇತ್ರ ಹಾಗೂ ನಗರಗಳು ಅಭಿವೃದ್ಧಿಯಾಗಬೇಕೆಂಬುದೇ ನನ್ನ ಆಸಕ್ತಿ. ಹಾಗಾಗಿ ನಗರಾಭಿವೃದ್ಧಿಗೆ ಮನವಿ ಮಾಡಿದ್ದೇನೆಂದು ಹೇಳಿದರು.
ಯಾವುದೇ ಖಾತೆ ನೀಡಿದರೂ ನಿಭಾಯಿಸುವೆ. ನನಗೆ 25 ವರ್ಷ ರಾಜಕೀಯದಲ್ಲಿ ಅನುಭವ ಇದೆ. ಖಾತೆ ಯಾವುದೇ ಕೊಟ್ಟರೂ ರಾಜ್ಯದ ಜನತೆಗೆ ಒಳ್ಳೆಯದನ್ನೇ ಮಾಡುತ್ತೇನೆ ಎಂದರು.