ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಹೊಸ ಸರ್ಕಾರದಲ್ಲಿ ಭಾಗಿಯಾಗದೇ ಇರಲು ತೀರ್ಮಾನಿಸಿದ್ದು, ಇದು ನನ್ನ ವೈಯಕ್ತಿಕ ನಿರ್ಧಾರ. ನನ್ನ ನಿರ್ಧಾರ ಸಂಬಂಧ ಇತ್ತೀಚಿಗೆ ವೈರಲ್ ಆಗಿದ್ದ ಆಡಿಯೋಗೆ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನಮ್ಮ ಹಿರಿಯ ನಾಯಕ, ಅವರ ಜೊತೆ ಈ ಕೆಲಸ ಮಾಡಿದ್ದೆ. ಹಾಗಾಗಿ ನಾನು ಮಾಜಿ ಮುಖ್ಯಮಂತ್ರಿ ಆದರೂ ನಂತರ ಮತ್ತೆ ಯಡಿಯೂರಪ್ಪ ಸರ್ಕಾರದಲ್ಲಿ ಮತ್ತೆ ಸಚಿವನಾಗಿ ಕೆಲಸ ಮಾಡಿದೆ. ಆದರೆ, ಈಗ ಸೀನಿಯಾರಿಟಿ ಹಿನ್ನೆಲೆ ಬೊಮ್ಮಾಯಿ ಸರ್ಕಾರದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ ಹೊಸ ಸರ್ಕಾರದ ಸಂಪುಟದಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದೇನೆ. ಇದು ನನ್ನ ವೈಯಕ್ತಿಕ ನಿರ್ಧಾರವಾಗಿದ್ದು, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ವರಿಷ್ಠರು ಹೆಚ್ಚಿನ ಜವಾಬ್ದಾರಿ ಕೊಟ್ಟರೆ ನಿರ್ವಹಿಸುತ್ತೇನೆ ಎಂದರು.
ಜಗದೀಶ್ ಶೆಟ್ಟರ್ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಗದೀಶ್ ಶೆಟ್ಟರ್ ನಿರ್ಧಾರದ ಬಗ್ಗೆ ಮಾಹಿತಿ ಇಲ್ಲ. ಅವರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.
ಜುಲೈ 26(ಮಂಗಳವಾರ) ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಪಕ್ಷದ ವರಿಷ್ಠರು ಆಯ್ಕೆ ಮಾಡಿದ್ದಾರೆ. ಇಂದು ಬೊಮ್ಮಾಯಿ ಅವರು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ ಬೋಧಿಸಿದರು.