ಬೆಂಗಳೂರು: ಹೆಚ್.ವಿಶ್ವನಾಥ್ ಅವರು ಯಾವ ಸಂದರ್ಭದಲ್ಲಿ ಏನು ಹೇಳುತ್ತಾರೋ ಅವರಿಗೇ ಅರ್ಥ ಆಗಲ್ಲ. ನನ್ನಿಂದ ಅವರಿಗೆ ಎಂಎಲ್‌ಸಿ ಟಿಕೆಟ್ ತಪ್ಪಿದೆ ಎಂಬುದು ಹಾಸ್ಯಾಸ್ಪದ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ನಾನು ಪ್ರಭಾವ ಬೀರುತ್ತಿದ್ದೇನೆ ಎಂದುಕೊಂಡಿದ್ದಾರೆ. ಆ ಭಾವನೆಗಾದರೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕುಮಾರಸ್ವಾಮಿ ಅವರದ್ದು ರಾಕ್ಷಸ ಆಡಳಿತ ಎಂದು ಹೇಳಿದ್ರು. ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ? ನನ್ನ ಆಡಳಿತದ ಅವಧಿಯಲ್ಲಿ ಕೊಡಗಿನ ದುರಂತದ ವೇಳೆ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದರು.
ನಾಲಿಗೆ ಇದೆ ಅಂತ ಏನ್ ಬೇಕಾದ್ರೂ ಮಾತನಾಡಬಾರದು. ರೈತರ ಸಾಲ ಮನ್ನಾ ಮಾಡಿದ್ದು, ಈ ರಾಕ್ಷಸ ಆಡಳಿತಾನೇ? ವಿಶ್ವನಾಥ್ ಅವರು ಬಿಜೆಪಿಗೆ ಸೇರಿ ಅವರನ್ನು ಅಧಿಕಾರಕ್ಕೆ ತಂದರು. ಬೀದಿಬದಿ ವ್ಯಾಪಾರಿಗಳನ್ನ ಈಗ ಬೀದಿಗೆ ತಂದಿದ್ದಾರೆ. ಇದು ಎಂತಹ ಸರ್ಕಾರ ಅಂತ ವಿಶ್ವನಾಥ್‌ರನ್ನೇ ಕೇಳಿ ಎಂದರು.
ಪಕ್ಷ ಹಾಗೂ ರಾಜ್ಯದ ಜವಾಬ್ದಾರಿ ಅರಿತು ಕಾರ್ಯ ನಿರ್ವಹಣೆ: ನಳಿನ್ ಕುಮಾರ್
ಮತ್ತೊಂದೆಡೆ ವಿಧಾನಸೌಧದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಆರ್. ಶಂಕರ್, ಸುನೀಲ್ ವಲ್ಯಾಪುರೆ, ಪ್ರತಾಪ್ ಸಿಂಹ್ ನಾಯಕ್ ಮತ್ತು ಎಂಟಿಬಿ ನಾಗರಾಜ್ ಅವರ ಮೂಲಕ ವಿಧಾನ ಪರಿಷತ್ನಲ್ಲಿ ಬಿಜೆಪಿಯ ಬಲ ಹೆಚ್ಚಾಗಿದೆ. ಪಕ್ಷದ ಹೈಕಮಾಂಡ್ ಇವರನ್ನ ಅನುಮೋದಿಸಿ ಸಮ್ಮತಿ ನೀಡಿ, ಪರಿಷತ್ ಆಯ್ಕೆಗೆ ಅವಕಾಶ ಮಾಡಿಕೊಟ್ಟಿದೆ. ಇವರು ಮುಂದಿನ ದಿನಗಳಲ್ಲಿ ಪಕ್ಷ ಹಾಗೂ ರಾಜ್ಯದ ಜವಾಬ್ದಾರಿ ಅರಿತು ಕಾರ್ಯನಿರ್ವಹಣೆ ಮಾಡಲಿದ್ದಾರೆ. ರಾಜ್ಯ ಸರ್ಕಾರ ಹಾಗೂ ಪಕ್ಷದ ಪರವಾಗಿ ಅಭಿನಂದಿಸುತ್ತೇನೆ ಎಂದರು. ಹೆಚ್.ವಿಶ್ವನಾಥ್ಗೆ ಟಿಕೆಟ್ ಕೈತಪ್ಪಲು ಕುಮಾರಸ್ವಾಮಿ, ಸಿದ್ದರಾಮಯ್ಯ ಕಾರಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ನಮ್ಮ ಪಕ್ಷದಲ್ಲಿ ಎಲ್ಲರಿಗೂ ಅವಕಾಶ ಇದೆ ಎಂದರು.