ಬೆಂಗಳೂರು : ಶಾಸಕ ಜಮೀರ್ ಅಹ್ಮದ್ ಅವರ ಮಾತಿನಲ್ಲಿ ಎಷ್ಟು ಸತ್ಯ ಇರುತ್ತದೆ?. ಯಡಿಯೂರಪ್ಪನವರು ಸಿಎಂ ಆದರೆ ಅವರ ಮನೆ ವಾಚ್ಮನ್ ಆಗ್ತೀನಿ ಅಂದಿದ್ರು. ವಾಚ್ಮನ್ ಕೆಲಸ ಖಾಲಿ ಇದೆ ಎಂಬ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೀವು ಯಾವಾಗ ವಾಚ್ಮನ್ ಆಗುತ್ತಿರಾ ಎಂದು ಜನ ಕೇಳ್ತಿದ್ದಾರೆ ಎಂದರು. ಆಸ್ತಿ ಸರ್ಕಾರಕ್ಕೆ ಬರೆದು ಕೊಡ್ತೇನೆ ಅಂತಾರೆ ಅದು ಪಕ್ಕಕ್ಕಿಡಿ. ಆ ಆಸ್ತಿ ಹೇಗೆ ಬಂತು ಅನ್ನುವುದನ್ನು ಹೇಳಲಿ ಎಂದು ಕಾಲೆಳೆದರು.
ಶ್ರೀಲಂಕಾದ ಕೊಲೊಂಬೊದಲ್ಲಿ ಜಮೀರ್ ಅವರಿಗೆ ತಪಸ್ಸು ಮಾಡುವುದಕ್ಕೆ ಜಾಗ ಇರಬಹುದೇನೋ, ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾದಂತೆ, ಕೊಲೊಂಬೊಗೆ ಹೋದ್ರೆ ಯಾವ ರೀತಿ ಶಾಂತಿ ಸಿಗುತ್ತದೆ ಎಂಬುದನ್ನು ಜಮೀರ್ ಅವರೇ ಸ್ಪಷ್ಟಪಡಿಸಬೇಕು. ಕ್ಯಾಸಿನೋಗೆ ಹೋದರೆ ನೆಮ್ಮದಿ ಸಿಗುತ್ತದೆಂದು ಜಮೀರ್ ಹೇಳಿದ್ದಾರೆ. ಯಾವ ರೀತಿ ನೆಮ್ಮದಿ ಸಿಗುತ್ತೆ ಅಲ್ಲಿ ಎಂಬುದನ್ನು ಅವರೇ ಹೇಳಬೇಕು ಎಂದರು.
ಜಮೀರ್ ಅವರ ಪಾಸ್‌ಪೋರ್ಟ್ ಪರಿಶೀಲನೆ ಮಾಡಿಸಬೇಕು. ಯಾಕೆ ಅವರು ಅಲ್ಲಿಗೆ ಹೋಗಿದ್ದರು? ಎಷ್ಟು ಬಾರಿ ಹೋಗಿದ್ದರು? ಅನ್ನೋದನ್ನ ಅವರೇ ಹೇಳಲಿ. ಮುಚ್ಚಿಟ್ಟರೆ ಸಂಶಯದ ಸುಳಿಯೊಳಗೆ ಸಿಲುಕುತ್ತಾರೆ ಎಂದರು.
ಫಾಜಿಲ್ ಜೊತೆ ಜಮೀರ್ ಫೋಟೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರದ್ದೋ ಜೊತೆ ಫೋಟೋ ತೆಗಿಸಿಕೊಂಡಂತಿಲ್ಲ. ಜನ್ಮ ಜನ್ಮಾಂತರದ ಸಂಬಂಧ ಇರುವ ಹಾಗೇ ಅವರಿಬ್ಬರ ಫೋಟೋಗಳಿವೆ. ಅವರೇ ಫೋಟೋ ಬಗ್ಗೆ ಸ್ಪಷ್ಟಪಡಿಸಿಬೇಕು ಎಂದು ಹೇಳಿದರು.
ಫಾಸಿಲ್ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಮೀರ್ ಇರುವ ಫೋಟೋ ಪ್ರದರ್ಶಿಸಿದ ಸಚಿವ ಸಿ ಟಿ ರವಿ, ಈ ಫೋಟೋ ಏನನ್ನು ಹೇಳುತ್ತದೆ?. ಮಾಜಿ ಸಿಎಂ ಸಿದ್ದರಾಮಯ್ಯ, ಜಮೀರ್ ಅಹ್ಮದ್ ಎಲ್ಲಾ ಇದ್ದಾರೆ ಇದು ಬಹಳ ಆತ್ಮೀಯ ಸಂಬಂಧ ಅಂತ ಈ ಮುಖಭಾವ ಹೇಳುತ್ತದೆ ಎಂದರು.
ಇದು ಯಾವುದೋ ಕುಟುಂಬದ ಕಾರ್ಯಕ್ರಮದಂತೆ ಕಾಣುತ್ತಿದೆ. ಯಾವುದೋ ಅಪರಿಚಿತರ ಜೊತೆ ತೆಗೆಸಿಕೊಂಡ ಫೋಟೋವಂತೂ ಅಲ್ಲ. ಈ ಬಗ್ಗೆ ತನಿಖೆಯ ನಂತರ ಗೊತ್ತಾಗಲಿದೆ ಎಂದರು. ನಾನು ಇವರನ್ನು ಪೆಡ್ಲರ್ ಅಂತಾ ಈಗಲೇ ಹೇಳುತ್ತಿಲ್ಲ. ಆದರೆ, ಅಲ್ಪಸಂಖ್ಯಾತರ ಗುರಾಣಿ ಹಿಡಿದು ಅವರು ತಪ್ಪಿಸಿಕೊಳ್ಳೋದು ಬೇಡ. ಷಡ್ಯಂತ್ರದ ಗುರಾಣಿ ಹಿಡಿಯೋದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಜಮೀರ್ ಅಹ್ಮದ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.