ಬೆಂಗಳೂರು: ಸದ್ಯದ ರಾಜಕೀಯ ಕ್ಷಣಕೊಂದು ತಿರುವು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಜಯನಗರ ಶಾಸಕಿ ಸೌಮ್ಯ ರೆಡ್ಡಿ ನಡೆ ಮತ್ತು ಕಾಂಗ್ರೆಸ್ ಹೈಕಮಾಂಡ್ ಸೋನಿಯಾಗಾಂಧಿ ರವರ ಭೇಟಿ ತೀವ್ರ ಕುತೂಹಲ ಕೆರಳಿಸಿತ್ತು. ಸದ್ಯ ಅವರು ಮೊದಲ ಬಾರಿಗೆ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಾನು ರಾಜೀನಾಮೆ ಕೊಟ್ಟಿಲ್ಲ! ದೆಹಲಿಗೆ ಹೋಗಿದ್ದು ಒಂದು ಕಾನ್ಫರೆನ್ಸ್ ನಿಮಿತ್ತ. ಅದನ್ನು ಹೊರತುಪಡಿಸಿ ಯಾವುದೇ ರಾಜಕೀಯ ಕಾರಣಕ್ಕೆ ಅಲ್ಲ. ಈ ಸಂದರ್ಭದಲ್ಲೇ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿರುವೆ, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಆಗಿರುವುದರಿಂದ ಕೆಲ ಚರ್ಚೆಗಳು ನಡೆಸಿದ್ದು,ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಅವರ ಗಮನಕ್ಕೂ ತಂದಿದ್ದೇನೆ. ನಾನು ದೆಹಲಿಗೆ ತೆರಳಿದ್ದು, ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ್ದು, ನನ್ನ ತಂದೆಯವರಿಗೆ ತಿಳಿದಿರಲಿಲ್ಲ, ಭೇಟಿಯ ನಂತರವಷ್ಟೇ ಅವರಿಗೆ ಈ ಬಗ್ಗೆ ತಿಳಿದಿದೆ ಎಂದರು.
ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಕೊಟ್ಟಿರುವುದಕ್ಕೆ ಕಾರಣ ಎಲ್ಲರಿಗೂ ಗೊತ್ತಿದೆ ಎಂದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ನನ್ನ ತಂದೆಯನ್ನು ಕಡೆಗಣಿಸಲಾಗಿದೆ. ಅವರಿಗೆ ತುಂಬಾ ನೋವಾಗಿದೆ. ರಾಜೀನಾಮೆ ನೀಡಿದ ನಂತರ ಉಳಿದವರು ಮುಂಬೈಗೆ ತೆರಳಿದರೂ ಸಹ, ನಮ್ಮ ತಂದೆಯವರು ಬೆಂಗಳೂರಿನಲ್ಲಿ ಉಳಿದಿದ್ದಾರೆ. ರಾಜೀನಾಮೆ ನೀಡುವುದಕ್ಕೆ ಬೇರೆ ಯಾವ ಶಾಸಕರಿಗೂ ನಾವು ಪ್ರೇರೇಪಿಸಿಲ್ಲ. ಅವರವರ ಸ್ವಂತ ನಿರ್ಧಾರವಾಗಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.
ಅಲ್ಲದೇ ನಮ್ಮ ತಂದೆಯವರು ಇದುವರೆಗೂ ಯಾವುದೇ ಸಚಿವ ಸ್ಥಾನದ ಆಸೆಯನ್ನು ವ್ಯಕ್ತಪಡಿಸಿಲ್ಲ.ಇನ್ನು ಮುಂದೆಯೂ ವ್ಯಕ್ತಪಡಿಸುವುದಿಲ್ಲ. ಅದನ್ನು ಅರಿತು ಅವರಿಗೆ ಸರಿಯಾದ ಸ್ಥಾನಮಾನ ನೀಡಬೇಕಾಗಿತ್ತು ಎಂದರು.
15ನೇ ತಾರೀಖು ರಾಜಿನಾಮೆ ವಿಚಾರವಾಗಿ ಸ್ಪೀಕರ್ ಭೇಟಿಯಾಗಲು ಸೂಚಿಸಿದ್ದು, ರಾಜೀನಾಮೆ ಅಂಗೀಕಾರವಾದರೆ, ನೀವು ರಾಜೀನಾಮೆ ನೀಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಾಜೀನಾಮೆ ಕೊಡುವುದಿಲ್ಲ. ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡುತ್ತಿದ್ದೇನೆ. ಇಲ್ಲಸಲ್ಲದ ಮಾಧ್ಯಮದ ಮಾತುಗಳನ್ನು ದಯವಿಟ್ಟು ಯಾರು ನಂಬಬೇಡಿ ಎಂದರು.