ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಯ ವಿಚಾರದಲ್ಲಿ ಸಚಿವ ಸಾ.ರಾ. ಮಹೇಶ್ ವಿರುದ್ಧ ನೇರವಾಗಿ ಟೀಕೆ ಮಾಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅವರು ಇಂದು ಬೆಳಗ್ಗೆ 11ಗಂಟೆಗೆ ಸುದ್ದಿಗೋಷ್ಟಿ ಕರೆದಿರುವುದು ಭಾರಿ ಕುತೂಹಲ ಮೂಡಿಸಿದೆ.
ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷರ ಲೆಟರ್ಹೆಡ್ ಬದಲು ಶಾಸಕರ ಲೆಟರ್ ಹೆಡ್ನಲ್ಲಿ ಸುದ್ದಿಗೋಷ್ಟಿಗೆ ಮಾಧ್ಯಮದವರನ್ನು ಆಹ್ವಾನಿಸಿರುವುದನ್ನು ಗಮನಿಸಿದರೆ ಅವರು ಜೆಡಿಎಸ್ ಸ್ಥಾನಕ್ಕೆ ರಾಜೀನಾಮೆ ನೀಡುವರೇ ಎಂಬ ಅನುಮಾನ ದಟ್ಟವಾಗಿದೆ. ರಾಜೀನಾಮೆ ಕೊಡಬೇಡಿ ಎಂದು ಸಿಎಂ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದರೂ ಸಹ ವಿಶ್ವನಾಥ್ ಅವರು ಸುದ್ದಿಗೋಷ್ಟಿ ಕರೆದಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಇದಕ್ಕೂ ಮುನ್ನ ವಿಶ್ವನಾಥ್ ಅವರು ಎರಡು ಬಾರಿ ರಾಜೀನಾಮೆಗೆ ಮುಂದಾಗಿದ್ದರು. ಆದರೆ, ಜೆಡಿಎಸ್ ವರಿಷ್ಠ ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಅವರು ರಾಜೀನಾಮೆ ಸ್ವೀಕರಿಸಲು ಒಪ್ಪಿರಲಿಲ್ಲ. ಈಗ ದೃಢ ನಿರ್ಧಾರಕ್ಕೆ ಬಂದಂತಿರುವ ಅವರು, ಇಂದು ಸುದ್ದಿಗೋಷ್ಠಿಯಲ್ಲೇ ರಾಜೀನಾಮೆ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿ ನಂತರ ದೇವೇಗೌಡರ ಬಳಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಕೆಆರ್ ನಗರದ ಸ್ಥಳೀಯ ಸಂಸ್ಥೆ ಚುನಾವಣೆಯ ವಿಚಾರವು ವಿಶ್ವನಾಥ್ ಅವರನ್ನು ಅತೀವವಾಗಿ ಕಾಡಿತ್ತು. ರಾಜ್ಯಾಧ್ಯಕ್ಷರಾಗಿ ತಾವು ಸೂಚಿಸಿದ್ದ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿಲ್ಲವೆಂದು ಹೆಚ್ ವಿಶ್ವನಾಥ್ ಮೊನ್ನೆ ತಮ್ಮ ಬೇಸರ ಹೊರಹಾಕಿದ್ದರು.