ಬೆಂಗಳೂರು: ನಗರದಲ್ಲಿ ಮೆಟ್ರೋ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಅಡ್ಡಿಯಾಗಲಿವೆ ಎನ್ನಲಾಗಿರುವ 872 ಮರಗಳ ಪೈಕಿ ಎಷ್ಟು ಮರಗಳನ್ನು ಸಂರಕ್ಷಿಸಬಹುದು ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಮರಗಳ ಸಂರಕ್ಷಣೆಗೆಂದೇ ರಚಿಸಿರುವ ತಜ್ಞರ ವಿಶೇಷ ಸಮಿತಿಗೆ ಹೈಕೋರ್ಟ್ ನಿರ್ದೇಶಿಸಿದೆ.
ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮರಗಳನ್ನು ಕತ್ತರಿಸಿಸುತ್ತಿರುವುದಕ್ಕೆ ಆಕ್ಷೇಪಿಸಿ ದತ್ತಾತ್ರೇಯ ಟಿ.ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಬಿಎಂಆರ್‌ಸಿಎಲ್ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಮೆಟ್ರೋ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ನಗರದಲ್ಲಿ 872 ಮರಗಳನ್ನು ಕತ್ತರಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕತ್ತರಿಸಲು ಅಗತ್ಯವಿರುವ ಮರಗಳ ಪೈಕಿ ಎಷ್ಟು ಮರ ಉಳಿಸಲು ಸಾಧ್ಯ ಎಂದು ಕೇಳಿತು.
ತಜ್ಞರ ವಿಶೇಷ ಸಮಿತಿಗೆ, ನೀವು ಮರಗಳಿರುವ ಜಾಗಕ್ಕೆ ಭೇಟಿ ಕೊಡಿ. ಕಡಿಯಲು ಉದ್ದೇಶಿಸಿರುವ 872 ಮರಗಳ ಪೈಕಿ ಎಷ್ಟನ್ನು ಸಂರಕ್ಷಣೆ ಮಾಡಲು ಸಾಧ್ಯ ಎಂಬುದನ್ನು ಪರಿಶೀಲಿಸಿ ಫೆ.15ರೊಳಗೆ ವರದಿ ನೀಡಿ ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ರೈತನ ಆಕ್ರೋಶದ ಮಾತುಗಳ ನಡುವೆ ವೇದಿಕೆಯಿಂದ ಕಾಲ್ಕಿತ್ತ ಸಚಿವ ಜಾರಕಿಹೊಳಿ