ಬೆಂಗಳೂರು: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಎಲ್ಲೆಡೆ ಕೋವಿಡ್ ಭೀತಿ ಶುರುವಾಗಿದ್ದು, ಇದರಿಂದ ಜೈಲುಗಳು ಹೊರತಾಗಿಲ್ಲ.
ಜೈಲಿಗೆ ಆರೋಪಿಗಳನ್ನ ಕಳುಹಿಸುವಾಗ ಬಹಳ ಎಚ್ಚರದಿಂದ ಇರಬೇಕು. ಸದ್ಯ ಪ್ರಮುಖ ಜೈಲಾಗಿರುವ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ 3,500 ಕೈದಿಗಳನ್ನು ಮಾತ್ರ ಇರಿಸಲು ಸಾಮರ್ಥ್ಯವಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಜೈಲಿನಲ್ಲಿ 5 ಸಾವಿರ ಮಂದಿಯನ್ನ ಇಡಲಾಗಿದೆ.
ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಿದ್ದು, ಹೊಸದಾಗಿ ಯಾರೆ ಬಂದರೂ ಅವರನ್ನು ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗ್ತಿದೆ. ಈ ಬಗ್ಗೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಬಂಧಿಖಾನೆ ಎಡಿಜಿಪಿ ಅಲೋಕ್ ಮೋಹನ್, ರಾಜ್ಯದಲ್ಲಿ ಒಟ್ಟು 47 ಕಾರಾಗೃಹಗಳಿದ್ದು, ಅವುಗಳಲ್ಲಿ 9 ಕೇಂದ್ರ ಕಾರಾಗೃಹ, 21 ಜಿಲ್ಲಾ ಕಾರಾಗೃಹ, ಬಯಲು ಕಾರಾಗೃಹ 1 ಹಾಗೂ 13 ತಾಲೂಕು ಹಾಗೂ 3 ಕಂದಾಯ ಕಾರಗೃಹಗಳಿವೆ. ಎಲ್ಲಾ ಕಾರಾಗೃಹಗಳಲ್ಲೂ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದಿದ್ದಾರೆ.
ರಾಜ್ಯ ಕಾರಾಗೃಹಗಳ ಒಟ್ಟು 14,153 ಕೈದಿಗಳು ಇದ್ದಾರೆ. ಅದರಲ್ಲಿ ವಿಚಾರಣಾಧೀನ ಕೈದಿಗಳು 10,554, ಸಜಾ ಕೈದಿಗಳು 3,599 ಮಂದಿ ಇದ್ದಾರೆ. ಇದರಲ್ಲಿ 13,565 ಪುರುಷರು, 588 ಮಂದಿ ಮಹಿಳೆಯರಿದ್ದಾರೆ. ಕೈದಿಗಳು, ಜೈಲು ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಈ ಕುರಿತು ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಸಫೇಟ್ ಮಾತನಾಡಿ, ಅಪರಾಧ ಪ್ರಕರಣಗಳು ನಡೆದಾಗ ಬಂಧಿಸುವ ಆರೋಪಿಗಳನ್ನು ಮೊದಲು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನೆಗೆಟಿವ್ ಬಂಧವರನ್ನ ಮಾತ್ರ ಜೈಲಿಗೆ ಕಳುಹಿಸಲಾಗುತ್ತಿದೆ. ಒಂದು ವೇಳೆ ಪಾಸಿಟಿವ್ ಬಂದ್ರೆ ಅಂತವರನ್ನು ಆಸ್ಪತ್ರೆಗೆ ರವಾನೆ ಮಾಡುವ ಕಾರಣ ಸದ್ಯ ಇಲ್ಲಿಯವರೆಗೆ ಜೈಲು ಒಳಗಡೆ ಇರುವ ಕೈದಿಗಳಿಗೆ ಯಾವುದೇ ಕೊರೊನಾ ಪಾಸಿಟಿವ್ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.