ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮನೆ ಕೆಲಸದಾಕೆಯಿಂದ ಲಕ್ಷಾಂತರ ರೂಪಾಯಿ ಪಡೆದು ಮನೆ ಮಾಲೀಕನೇ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಯಲಹಂಕ ನಿವಾಸಿ, ಮಹಿಳೆಯ ಪತಿ ಪೆಂಚಾಲಯ್ಯ ನೀಡಿದ ದೂರಿನ ಮೇರೆಗೆ ಬಸವರಾಜ್ ವಿರುದ್ಧ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಸಿಎಸ್ಒ ಆಗಿ ಕೆಲಸ ಮಾಡುತ್ತಿದ್ದೇನೆಂದು ನಾಗಲಕ್ಷ್ಮೀ ಎಂಬಾಕೆಯನ್ನು ಪರಿಚಯಿಸಿಕೊಂಡ ಆರೋಪಿ ನಕಲಿ ಗುರುತಿನ ಚೀಟಿ ಹಾಗೂ ವಿಸಿಟಿಂಗ್ ಕಾರ್ಡ್ ತೋರಿಸಿದ್ದಾನೆ. ನಿನ್ನ ಮಗನಿಗೆ ರೈಲ್ವೆಯಲ್ಲಿ ಕೆಲಸ ಕೊಡಿಸುತ್ತೇನೆ, ಆದರೆ ಹಣ ಖರ್ಚಾಗಲಿದೆ ಎಂದು ತಿಳಿಸಿದ್ದಾನೆ ಎಂಬ ಮಾಹಿತಿ ಇದೆ.
ಮಗನಿಗೆ ಸರ್ಕಾರಿ ಕೆಲಸ ಸಿಕ್ಕರೆ ಭವಿಷ್ಯ ಉಜ್ವಲವಾಗುವುದು ಎಂದು ಭಾವಿಸಿದ ಮನೆಕೆಲಸದಾಕೆ ಮಾಲೀಕನಿಗೆ 2 ಲಕ್ಷ ರೂ ನಗದು ನೀಡಿದ್ದಾಳೆ. ಬಳಿಕ ಪತಿ ಪೆಂಚಾಲಯ್ಯ ಫೋನ್ ಪೇ ಮೂಲಕ ಹಂತ ಹಂತವಾಗಿ 3.75 ಲಕ್ಷ ರೂ.ಕೊಟ್ಟಿದ್ದಾರೆ. ಬಸವರಾಜ್ ಮೇಲೆ ನಂಬಿಕೆಯಿಟ್ಟು ಒಟ್ಟು 5.75 ಲಕ್ಷ ರೂ ಕೊಟ್ಟಿದ್ದಾರೆ. ಹಣ ಪಡೆದ ಕೆಲ ದಿನಗಳ ಬಳಿಕ ಬಸವರಾಜ್ ಮನೆ ಖಾಲಿ ಮಾಡಿದ್ದಾನೆ. ಕೆಲಸ ಕೊಡಿಸದೆ ಹಣ ಹಿಂತಿರುಗಿಸದೆ ಸತಾಯಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಘಟನೆ ಸಂಬಂಧ ಪೆಂಚಾಲಯ್ಯ ಯಲಹಂಕ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.