ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಹೊಸಕೆರೆಹಳ್ಳಿ ಏರಿಯಾ ಸಂಪೂರ್ಣವಾಗಿ ಕೆರೆ ಸ್ವರೂಪ ತಾಳಿದಂತಾಗಿದೆ.
ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಪಕ್ಕದ ರಸ್ತೆಯಲ್ಲಿಯೂ ರಭಸದಿಂದ ನೀರು ಹರಿಯತೊಡಗಿದ್ದು, ಆಟೋ, ಕಾರು ಸೇರಿದಂತೆ ಇನ್ನಿತರ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗತೊಡಗಿವೆ. ಇಲ್ಲಿನ ಮುಖ್ಯ ರಸ್ತೆಗಳು ಕೂಡಾ ಜಲಾವೃತವಾಗಿದ್ದು, ಮೆಟ್ರೋ ಕಾಮಗಾರಿಗೆ ಹಾಕಿದ್ದ ಬ್ಯಾರಿಕೇಡ್ಗಳು ರಸ್ತೆಗೆ ಬಿದ್ದಿವೆ.
ನಗರದ ಜೆ.ಸಿ.ರಸ್ತೆಯಲ್ಲಿದ್ದ ಕೆಲ ವಾಹನಗಳೂ ಸಹ ನೀರಿನಲ್ಲಿ ಮುಳುಗಿದ್ದು, ಚರಂಡಿ ವ್ಯವಸ್ಥಿತವಾಗಿಲ್ಲದ ಕಾರಣ ಮೋರಿ ನೀರೆಲ್ಲವೂ ರಸ್ತೆಯಲ್ಲಿ ಬ್ಲಾಕ್ ಆಗಿವೆ. ವರುಣನ ಆರ್ಭಟಕ್ಕೆ ನಗರದ ಗವಿಗಂಗಾಧರೇಶ್ವರ ದೇವಸ್ಥಾನದ ಗೋಡೆ ಕುಸಿದಿದೆ.