ಬೆಂಗಳೂರು: ಆನ್ಲೈನ್ ಮೂಲಕ ಪರಿಚಯ ಮಾಡಿಕೊಂಡ ಯುವತಿಯೊಬ್ಬಳು ಸ್ನೇಹದ ಸೋಗಿನಲ್ಲಿ ವೈದ್ಯರೋಬ್ಬರನ್ನು ಹನಿಟ್ರ್ಯಾಪ್ಗೆ ಬೀಳಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಗೆಳತಿ ಜೊತೆ ವೈದ್ಯರ ಮನೆಯಲ್ಲಿರುವಾಗಲೇ ಗುಪ್ತಚರ ಪೊಲೀಸರ ಸೋಗಿನಲ್ಲಿ ಯುವತಿಯ ಸ್ನೇಹಿತರಿಬ್ಬರು ಮನೆಗೆ ಬಂದು ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಒಪ್ಪದಿರುವಾಗ ವೈದ್ಯನ ಜೊತೆಯಲ್ಲಿದ್ದ ಗೆಳತಿಯೇ ತಿರುಗಿಬಿದ್ದಿದ್ದಾಳೆ. ಹನಿಟ್ರ್ಯಾಪ್ ಘಟನೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕೃತಿ ನಗರದ ನಿವಾಸಿ 40 ವರ್ಷದ ವೈದ್ಯ ನೀಡಿದ ದೂರಿನ ಮೇರೆಗೆ ಚಾಂದಿನಿ, ಪ್ರಜ್ವಲ್, ಅನಿರುದ್ಧ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ವೈದ್ಯನನ್ನು ಕೆಲ ದಿನಗಳ ಹಿಂದಷ್ಟೇ ಸೋಷಿಯಲ್ ಮೀಡಿಯಾದ ಮೂಲಕ ಯುವತಿ ಪರಿಚಯ ಮಾಡಿಕೊಂಡಿದ್ದಳು. ಬಳಿಕ ಇಬ್ಬರು ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಪ್ರತಿನಿತ್ಯ ಇಬ್ಬರು ಚಾಟಿಂಗ್ ಮಾಡುತ್ತಿದ್ದರು. ಕಾಲ ಕ್ರಮೇಣ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಜೂ.13ರಂದು ಚಾಂದಿನಿ ವೈದ್ಯರಿಗೆ ಕರೆ ಮಾಡಿ ಬೇಜಾರುಗುತ್ತಿದೆ, ಎಲ್ಲಾದರೂ ಹೋಗೋಣ ಎಂದು ಡಾಕ್ಟರ್ಗೆ ಹೇಳಿದ್ದಳು.
ಇದಕ್ಕೆ ಒಪ್ಪಿಕೊಂಡ ವೈದ್ಯ, ಅದೇ ದಿನ ಸಂಜೆ ಇಬ್ಬರು ಹೋಟೆಲ್ಗೆ ಹೋಗಿ ಇಬ್ಬರು ಊಟ ಮಾಡಿದ್ದಾರೆ. ಬಳಿಕ ರಾತ್ರಿ ಯುವತಿಯನ್ನು ವೈದ್ಯ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಹೀಗೆ ಇರಬೇಕಾದರೆ ಇಬ್ಬರು ಮನೆಯಲ್ಲಿದ್ದಾಗಲೇ ಗುಪ್ತಚರ ಪೊಲೀಸ್ ಸೋಗಿನಲ್ಲಿ ಯುವತಿಯ ಸ್ನೇಹಿತರಿಬ್ಬರು ಮನೆಗೆ ಬಂದಿದ್ದಾರೆ. 10 ಲಕ್ಷ ರೂ. ಹಣ ಕೊಡಿ, ಇಲ್ಲದಿದ್ದರೆ ಗೆಳತಿ ಜೊತೆ ಕಳೆದಿರುವ ಖಾಸಗಿ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಬೆದರಿಕೆ ಬಗ್ಗದ ಡಾಕ್ಟರ್ ಆರೋಪಿಗಳ ವಿರುದ್ಧ ಕಿಡಿಕಾರಿದ್ದಾರೆ. ಈ ವೇಳೆ ಯುವತಿ ತನ್ನ ಅಸಲಿ ಬಣ್ಣವನ್ನು ಬಿಚ್ಚಿಟ್ಟಿದ್ದಾಳೆ. ಪೊಲೀಸರು ಎಂದು ಹೇಳಿಕೊಂಡು ಬಂದಿರುವ ಯುವಕರು ನನ್ನ ಸ್ನೇಹಿತರು. ಅವರಿಗೆ ಹಣ ಕೊಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಜೇಬಿನಲ್ಲಿದ್ದ ಐದು ಸಾವಿರ ರೂ.ಕಸಿದುಕೊಂಡಿದ್ದಾರೆ. ಮತ್ತೆ ಪೋನ್ ಮಾಡುತ್ತೇವೆ, ತಾವು ಸೂಚಿಸಿದ ಸ್ಥಳಕ್ಕೆ ಹೇಳಿದಷ್ಟು ಹಣ ತಂದು ಕೊಡದಿದ್ದರೆ ವಿಡಿಯೊ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.